ಕೇವಲ 10 ಸಾವಿರ ರೂ.ಗೆ ಎಸಿ, ವಿದ್ಯುತ್ ಬಳಕೆ 10 ಪಟ್ಟು ಕಮ್ಮಿ - ಇದು ರಾಜಸ್ತಾನದ ಯುವಕನ ಸಾಧನೆ
ಟೀಮ್ ವೈ.ಎಸ್.ಕನ್ನಡ
ಪ್ರಾಮಾಣಿಕತೆ ಹಾಗೂ ಸರಿಯಾದ ದಿಸೆಯಲ್ಲಿ ಕೆಲಸ ಮಾಡಿದ್ರೆ ಅದು ನಿಮ್ಮನ್ನು ಯಶಸ್ಸಿಯಾಗಿ ಗುರಿ ತಲುಪಿಸುತ್ತೆ ಅನ್ನೋ ಮಾತಿದೆ. ಇದಕ್ಕಾಗಿ ನಿರಂತರ ಪರಿಶ್ರಮ ಮತ್ತು ಛಲ ಬೇಕೇ ಬೇಕು. ಮಧ್ಯೆ ಮಧ್ಯೆ ಸಿಗುವ ಕೆಲವು ಸೋಲುಗಳು ಔಷಧದಂತೆ ಕಾರ್ಯನಿರ್ವಹಿಸುತ್ತವೆ. ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ರಾಜಸ್ತಾನದ ಸರದಾರ ನಗರದ ತ್ರಿಲೋಕ್ ಕಟಾರಿಯಾ ಅವರ ಬದುಕಿನ ಕಹಾನಿ ಕೂಡ ಇದೇ ರೀತಿಯಾಗಿದೆ. ತ್ರಿಲೋಕ್ ಕಟಾರಿಯಾ ಅತ್ಯಂತ ಕಡಿಮೆ ವೆಚ್ಚದಲ್ಲಿ, ಕಡಿಮೆ ವಿದ್ಯುತ್ನಲ್ಲೂ ಕಾರ್ಯನಿರ್ವಹಿಸಬಲ್ಲ ವಿಶಿಷ್ಟ ಏರ್ ಕಂಡಿಷನರ್ ಒಂದನ್ನು ಕಂಡು ಹಿಡಿದಿದ್ದಾರೆ.

ಈ ಬಗ್ಗೆ ಸಂಶೋಧನೆ ನಡೆಸಿ ಅದನ್ನು ಕಾರ್ಯರೂಪಕ್ಕೆ ತರಲು ಅವರಿಗೆ ಮೂರು ವರ್ಷಗಳೇ ಬೇಕಾಯ್ತು. ಇದಕ್ಕಾಗಿಯೇ ಅವರು 8-10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿದ ತ್ರಿಲೋಕ್ಗೆ ಕೊನೆಗೂ ಸಫಲತೆ ಸಿಕ್ಕಿದೆ. 10 ಪಟ್ಟು ಕಡಿಮೆ ವಿದ್ಯುತ್ ವ್ಯಯಿಸಿ 10 ಟನ್ ಎಸಿ ನೀಡಬಲ್ಲ ಸಾಧನವನ್ನು ಅವರು ಕಂಡುಹಿಡಿದಿದ್ದಾರೆ.
ಈ ಏರ್ ಕಂಡೀಷನರ್ ನಿರ್ಮಾಣಕ್ಕೆ ಕೇವಲ 10 ಸಾವಿರ ರೂಪಾಯಿ ವೆಚ್ಚವಾಗಿದೆ. ಇದನ್ನು ಮಾರುಕಟ್ಟೆಗೆ ಪರಿಚಯಿಸಿದ್ರೆ ಎಲ್ಲಾ ವೆಚ್ಚಗಳು ಸೇರಿ ಸುಮಾರು 15,000 ರೂಪಾಯಿ ಆಗಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ 25-30000 ಮೌಲ್ಯದ ಎಸಿಗಳಿಗಿಂತ ಇದರ ಬೆಲೆ ಕಡಿಮೆ.
'' ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ, ವಿದ್ಯುತ್ ದರದಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಲ್ಗೆ ಹೆದರಿ ವಿದ್ಯುತ್ ಬಳಸಲು ಹಿಂದೇಟು ಹಾಕುವಂತಾಗಿದೆ. ಈ ಭಯವನ್ನು ಹೋಗಲಾಡಿಸಿ, ಜನಸಾಮಾನ್ಯರಿಗೆ ಸುಲಭವಾಗುವಂತಹ, ಕಡಿಮೆ ವಿದ್ಯುತ್ನಲ್ಲಿ ಕೆಲಸ ಮಾಡುವಂತಹ ಏರ್ ಕಂಡೀಶನರ್ ನಿರ್ಮಾಣ ಮಾಡಬೇಕೆಂದು ಕನಸು ಕಂಡಿದ್ದೆ'' ಎನ್ನುತ್ತಾರೆ ತ್ರಿಲೋಕ್. ಬಹಳ ವರ್ಷಗಳಿಂದ ತ್ರಿಲೋಕ್ ಎಸಿ ರಿಪೇರಿ ಕೆಲಸ ಮಾಡ್ತಿದ್ದಾರೆ. ಪ್ರತಿ ಬಾರಿ ದುರಸ್ತಿಗೆ ಹೋದಾಗ್ಲೂ, ಪ್ರತಿ ಮನೆಯಲ್ಲೂ ಎಸಿ ಹಾಕಿದಾಗಿನಿಂದ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ ಅಂತಾ ಅಳಲು ತೋಡಿಕೊಳ್ತಿದ್ರು. ಇದನ್ನು ಕೇಳಿದ ತ್ರಿಲೋಕ್ ಕಡಿಮೆ ವಿದ್ಯುತ್ ಬಳಸುವಂತಹ ಎಸಿಯನ್ನು ಕಂಡು ಹಿಡಿಯಲೇಬೇಕೆಂದು ಅವರು ನಿರ್ಧಾರ ಮಾಡಿದ್ರು.
ತ್ರಿಲೋಕ್ ತಯಾರಿಸಿರುವ ಎಸಿ ಪರಿಸರ ಸ್ನೇಹಿಯೂ ಹೌದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಏರ್ ಕಂಡೀಷನರ್ಗಳಿಂದ ಓಝೋನ್ ಪದರಕ್ಕೆ ಧಕ್ಕೆಯಾಗುತ್ತಿದೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ತ್ರಿಲೋಕ್ ತಮ್ಮ ಎಸಿಯಲ್ಲಿ ಹೈಡ್ರೋಕಾರ್ಬನ್ ಬಳಸಿರುವುದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ.
ವಿದ್ಯುತ್ ಬಳಕೆ 10 ಪಟ್ಟು ಕಡಿಮೆ...
ಎಸಿ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್ ಒಬ್ಬರ ಪ್ರಕಾರ, ತ್ರಿಲೋಕ್ ಅವರ ಏರ್ ಕಂಡೀಷನರ್ ಉಳಿದವುಗಳಿಗಿಂತ 10 ಪಟ್ಟು ಕಡಿಮೆ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ. ಕಡಿಮೆ ವೋಲ್ಟೇಜ್ನಲ್ಲೂ ಕಾರ್ಯನಿರ್ವಹಿಸಬಲ್ಲ ಕಂಪ್ರೆಸರ್ ಅನ್ನು ಇದಕ್ಕೆ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಎಸಿಗಳು 2000 ವೋಲ್ಟ್ ವಿದ್ಯುತ್ ಬಳಸಿಕೊಂಡು ಒಂದು ಟನ್ ಎಸಿ ನೀಡಿದ್ರೆ, ತ್ರಿಲೋಕ್ ಅವರು ತಯಾರಿಸಿರುವ ಎಸಿ ಕೇವಲ 200 ವೋಲ್ಟ್ ವಿದ್ಯುತ್ ಬಳಸಿಕೊಳ್ಳುತ್ತದೆ. ಇದಕ್ಕೆ ಸ್ಟೆಬಿಲೈಝರ್ಗಳ ಅವಶ್ಯಕತೆಯಿಲ್ಲ, ವೋಲ್ಟೇಜ್ ಹೆಚ್ಚು ಕಡಿಮೆಯಾದ್ರೂ ಇದು ಸುರಕ್ಷಿತವಾಗಿರುತ್ತದೆ.

ತ್ರಿಲೋಕ್ ಓದಿದ್ದು ಕೇವಲ ಪಿಯುಸಿ...
ನ್ಯಾಶನಲ್ ಸ್ಕೂಲ್ ಆಫ್ ಓಪನ್ ಲರ್ನಿಂಗ್ನಲ್ಲಿ ತ್ರಿಲೋಕ್ 12ನೇ ತರಗತಿ ಮುಗಿಸಿದ್ರು. ಬಳಿಕ ಎಸಿಗೆ ಸಂಬಂಧಿಸಿದ ಐಟಿಐ ಪಾರ್ಟ್ ಟೈಮ್ ಡಿಪ್ಲೊಮಾ ಮಾಡಿಕೊಂಡು ಡೆಹ್ರಾಡೂನ್, ಫರೀದಾಬಾದ್, ದೆಹಲಿ, ನೊಯ್ಡಾ ಸೇರಿದಂತೆ ಹಲವೆಡೆ ಎಸಿ ನಿರ್ಮಾಣ ಮಾಡುವ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿ ಅವರು ಎಸಿ ನಿರ್ಮಾಣದ ವಿಧಿವಿಧಾನಗಳನ್ನು ತಿಳಿದುಕೊಂಡ್ರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಸಿಗಿಂತ ಉತ್ತಮವಾದುದನ್ನು ತಯಾರಿಸಲು ಆರಂಭಿಸಿದ್ರು.
ಪೇಟೆಂಟ್ ಪಡೆಯುವ ಪ್ರಕ್ರಿಯೆ ಶುರು...
ತಮ್ಮ ಉತ್ಪನ್ನಕ್ಕೆ ಪೇಟೆಂಟ್ ಪಡೆಯುವ ಪ್ರಕ್ರಿಯೆಯನ್ನು ತ್ರಿಲೋಕ್ ಆರಂಭಿಸಿದ್ದಾರೆ. ಪೇಟೆಂಟ್ ಸಿಕ್ಕ ಬಳಿಕ ಉತ್ಪನ್ನವನ್ನು ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ತ್ರಿಲೋಕ್ ಅವರು ತಯಾರಿಸಿರುವ ಏರ್ ಕಂಡೀಷನರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈಗಾಗ್ಲೇ ಹಲವು ಕಂಪನಿಗಳು ಮುಂದೆ ಬಂದಿವೆ.
ಲೇಖಕರು: ಅನ್ಮೋಲ್
ಅನುವಾದಕರು: ಭಾರತಿ ಭಟ್