ನನಸಾಯ್ತು ಕನಸು...ಬ್ಲಾಗ್‍ನಿಂದ ಬ್ಯುಸಿನೆಸ್‍ವರೆಗೆ..!
ಟೀಮ್ ವೈ.ಎಸ್.
ಕೆಲವರಿಗೆ ಬ್ಲಾಗ್ ಬರೆಯೋದು ಹವ್ಯಾಸ. ತಮ್ಮ ಕನಸು, ಕಲ್ಪನೆ, ಅನುಭವಗಳನ್ನು ಬಿಚ್ಚಿಡುವ ಸಾಧನ ಈ ಬ್ಲಾಗ್. ಪ್ರೀತಿಯಲ್ಲಿ ಬಿದ್ದು ಸಕ್ಸಸ್ ಆದವರು, ಪ್ರೀತಿಯಲ್ಲಿ ನೊಂದು ಬೆಂದವರು ಕೂಡ ಬ್ಲಾಗ್ ಮೊರೆ ಹೋಗ್ತಾರೆ. ಅದೆಷ್ಟು ಕಸರತ್ತು ಮಾಡಿದರೂ ನಿರೀಕ್ಷೆಯಷ್ಟು ಹೆಸರು ಗಳಿಸಲಾಗದ ಲೇಖಕರು ಕೂಡ ಬ್ಲಾಗ್‍ನಲ್ಲಿ ತಮ್ಮ ಮನದಾಳವನ್ನು ಬಿಚ್ಚಿಡ್ತಾರೆ. ಆದ್ರೆ ಬ್ಲಾಗನ್ನು ಕೇವಲ ಹವ್ಯಾಸವಾಗಲ್ಲದೆ ವೃತ್ತಿಯಾಗಿ ತೆಗೆದುಕೊಂಡವರೂ ಇದ್ದಾರೆ. ಬ್ಲಾಗ್‍ನಿಂದ್ಲೇ ಪ್ರಸಿದ್ಧಿ ಪಡೆದ 5 ಕಂಪನಿಗಳ ಬಗ್ಗೆ ನಾವ್ ನಿಮಗೆ ಹೇಳ್ತೀವಿ.
1. ಕುಂಜುಮ್
ಇದು ಪ್ರಾಮಾಣಿಕವಾದ ಸಿದ್ಧಾಂತವುಳ್ಳ ಟ್ರಾವೆಲ್ ಬ್ಲಾಗ್. ಪ್ರಯಾಣಕ್ಕೆ ಸರಿಸಮನಾದ ಅಸ್ತಿತ್ವವುಳ್ಳ ಬ್ಲಾಗ್ ಒಂದನ್ನು ನಿರ್ಮಿಸುವ ಇಚ್ಛೆ ಅಜಯ್ ಅವರಿಗಿತ್ತು. ಛತ್ರಿ ಬ್ರಾಂಡ್‍ನ ಟ್ರಾವೆಲ್ ಬ್ಲಾಗ್ ಒಂದನ್ನು ಅವರು ಆರಂಭಿಸಿದ್ರು. ನಂತರದ ದಿನಗಳಲ್ಲಿ ಬರೀ ಬ್ಲಾಗ್ ಮಾತ್ರವಲ್ಲ ಕುಂಜುಮ್ ಟ್ರಾವೆಲ್ ಕೆಫೆ, ಕುಂಜುಮ್ ಟಿವಿ ಕೂಡ ಜನ್ಮ ತಾಳಿದೆ.

ಕುಂಜುಮ್ ಐಡಿಯಾ..
ಕುಂಜುಮ್ ಒಂದು ಸಾಮಾಜಿಕ ಸಾಹಸೋದ್ಯಮದ ರೂಪದಲ್ಲಿ ಆರಂಭವಾಗಿತ್ತು. ಭಾರತದಲ್ಲಿನ ಪ್ರಯಾಣದ ಅನುಭವವನ್ನು ವಿಶ್ವದೆಲ್ಲೆಡೆ ಪಸರಿಸುವ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿ ತಮ್ಮ ಉದ್ದೇಶವಾಗಿತ್ತು ಎನ್ನುತ್ತಾರೆ ಅಜಯ್ ಜೈನ್. ಈ ಪ್ರಯಾಣ ಪ್ರಿಯ ಬ್ಲಾಗ್ ಮೂಲಕವೇ ಉದ್ಯಮಿಯಾಗಿ ಬದಲಾದ್ರು.
ಅದ್ವಿತೀಯ ಉದ್ಯಮ ಹೇಗೆ..?
ಭವ್ಯವಾದ ಪ್ರಯಾಣದ ಅನುಭವ ಹೇಗಿರುತ್ತೆ ಅನ್ನೋದನ್ನು ವಿಶ್ವಕ್ಕೆ ತೋರಿಸಲು ಅಜಯ್ ಬಯಸಿದ್ದಾರೆ. ಸೊಗಸಾದ ಪ್ರಯಾಣದ ವಿವರವನ್ನು ಹುಡುಕಲು ಇದೊಂದು ಅತ್ಯುತ್ತಮ ತಾಣ. ಅಷ್ಟೇ ಅಲ್ಲ ದೆಹಲಿಯ ಹೌಜ್‍ಖಾಸ್ ಗ್ರಾಮದಲ್ಲಿ ಕುಂಜುಮ್ ಟ್ರಾವೆಲ್ ಕೆಫೆ ನಿರ್ಮಾಣ ಮಾಡಿದ್ದಾರೆ.
ಕಾ-ಚಿಂಗ್..
ಆತ್ಮದಲ್ಲಿ ಉದ್ಯಮಿಯಾಗಿದ್ರೂ ನಾನು ಬರವಣಿಗೆಯನ್ನು ಬಿಡಲು ಸಾಧ್ಯವೇ ಇಲ್ಲ. ನಾನು ಕೂಡ ಪ್ರಯಾಣದಲ್ಲಿರುವಂತೆಯೇ ಅನುಭವಿಸಿ ಬರೆದಿದ್ದೇನೆ ಎನ್ನುತ್ತಾರೆ ಅಜಯ್. ಪ್ರತಿ ಮೈಲುಗಲ್ಲು ಕೂಡ ಅವರಿಗೇ ಅಚ್ಚರಿ ತಂದಿದೆಯಂತೆ. ಈ ಬ್ಲಾಗ್‍ಗೆ ಸುಮಾರು 70,000 ಚಂದಾದಾರರಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲೂ ಕುಂಜುಮ್ ಹೆಸರು ಮಾಡಿದೆ. ಟ್ರಾವೆಲ್ ಕೆಫೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದೆ.
2. ಪಾಪ್ಸ್ಕೋ..
ಪ್ರಿಯಾಂಕಾ ಗಿಲ್ ಪತ್ರಿಕೋದ್ಯಮಿ. ಲೈಫ್‍ಸ್ಟೈಲ್ ಸುದ್ದಿಗಳ ಮೂಲಕವೇ ಹೆಸರು ಮಾಡಿದವರು. ಮ್ಯಾನೇಜ್‍ಮೆಂಟ್ ಕನ್ಸಲ್ಟಂಟ್ ನಮ್ರತಾ ಬೋಸ್ಟ್ರಮ್ ಅವರಿಗೆ ಕೂಡ ಫ್ಯಾಷನ್ ಜಗತ್ತಿನ ಬಗ್ಗೆ ಅತ್ಯಂತ ಆಸಕ್ತಿ. ಡಿಜಿಟಲ್ ಲೈಫ್‍ಸ್ಟೈಲ್ ದುನಿಯಾದಲ್ಲಿ ಹೊಸದೇನನ್ನಾದ್ರೂ ಮಾಡಬೇಕೆಂಬ ಆಸೆ ಇವರಿಬ್ಬರಿಗೂ ಇತ್ತು.
ಪಾಪ್ಸ್ಕೋ ಐಡಿಯಾ:
ನಗರ ಪ್ರದೇಶದ ಮಹಿಳೆಯರಿಗೆ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಇವೆರಡೇ ಪ್ರಪಂಚ. ಇದನ್ನು ಬಿಟ್ಟು ಹೊಸದೊಂದು ಲೋಕಕ್ಕೆ ಅವರನ್ನು ಕರೆದೊಯ್ಯಬೇಕೆಂದು ಪ್ರಿಯಾಂಕಾ ಹಾಗೂ ವಂದನಾ ನಿರ್ಧರಿಸಿದ್ರು. ಇದಕ್ಕಾಗಿಯೇ ಪಾಪ್ಸ್ಕೋ ಆರಂಭಿಸಿದರು.
ಪಾಪ್ಸ್ಕೋದ ವಿಶೇಷತೆ:
ಹೆಂಗೆಳೆಯರು ಪ್ರತಿ ದಿನ ಎದುರಿಸುವ ಸಮಸ್ಯೆಗೆ ಪಾಪ್ಸ್ಕೋದಲ್ಲಿ ಪರಿಹಾರ ಸಿಕ್ಕಿದೆ. ಎಷ್ಟೋ ವರ್ಷಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ಇದರಲ್ಲಿದೆ.

ಕಾ-ಚಿಂಗ್: ಆರಂಭವಾಗಿ ಕೇವಲ 7 ತಿಂಗಳುಗಳಲ್ಲಿ ಪಾಪ್ಸ್ಕೋ ಒಂದು ಮಿಲಿಯನ್‍ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದೆ. ಪ್ರತಿ ತಿಂಗಳು ನಾಲ್ಕು ಮಿಲಿಯನ್‍ಗೂ ಅಧಿಕ ಮಂದಿ ಪಾಪ್ಸ್ಕೋ ಪೇಜ್‍ಗೆ ವಿಸಿಟ್ ಮಾಡ್ತಿದ್ದಾರೆ. ಹುಸೇನ್ ಕಾಂಜಿ, ಗೂಗಲ್ ಇಂಡಿಯಾದ ಮುಖ್ಯಸ್ಥ ರಂಜನ್ ಆನಂದನ್‍ರಂತಹ ಉದ್ಯಮಿಗಳು ಕೂಡ ಪಾಪ್ಸ್ಕೋನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿರುವುದು ವಿಶೇಷ.
3. ಮಿಸ್ ಮಾಲಿನಿ
ಮಿಸ್ ಮಾಲಿನಿಯಲ್ಲಿ ಮನರಂಜನೆ ಹಾಗೂ ಸಿನಿದುನಿಯಾದ ಪೋಟೋಗಳದ್ದೇ ದರ್ಬಾರ್. ಈ ವೆಬ್‍ಸೈಟ್‍ನ ಲೋಗೋ ಕೂಡ ಮಾಲಿನಿ ಅಗರ್ವಾಲ್ ಅವರ ಜೀವನವನ್ನೇ ಆಧಾರಿಸಿದೆ. ಅವರೇ ಈ ವೆಬ್‍ಸೈಟ್‍ನ ಸಂಸ್ಥಾಪಕರು.
ಮಿಸ್ ಮಾಲಿನಿ ಐಡಿಯಾ:
ಮನರಂಜನಾ ಪತ್ರಿಕೋದ್ಯಮ ದೊಡ್ಡ ದೊಡ್ಡ ಕಾರ್ಪೊರೇಟ್ ವಲಯಗಳಿಂದ್ಲೇ ಆಳಲ್ಪಟ್ಟಿದೆ. ಈ ವೆಬ್‍ಸೈಟ್ ಸುದ್ದಿಗಳನ್ನು ಹೆಕ್ಕಿ ತೆಗೆದು ಓದುಗರ ಮುಂದಿಡುತ್ತಿದೆ. ಜನಸಾಮಾನ್ಯರ ಆಸಕ್ತಿಯನ್ನೇ ಗುರಿಯಾಗಿರಿಸಿಕೊಂಡು ಆರಂಭಿಸಿದ ಬ್ಲಾಗ್ ಇದು. ಭಾರತದಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಸಂದರ್ಭದಲ್ಲೇ ತಾವು ಬ್ಲಾಗ್ ಆರಂಭಿಸಿದ್ದು ತಮ್ಮ ಅದೃಷ್ಟ ಎನ್ನುತ್ತಾರೆ ಮಾಲಿನಿ.
ಮಿಸ್ ಮಾಲಿನಿ ವಿಶೇಷತೆ:
ಆಧುನಿಕ ಭಾರತವನ್ನ ಮಾಲಿನಿ ಅಗರ್ವಾಲ್ ಓದುಗರೆದುರು ತೆರೆದಿಡುತ್ತಿದ್ದಾರೆ. ಮನರಂಜನಾ ಜಗತ್ತಿನ ಹೊಸ ಹೊಸ ಆಯಾಮಗಳನ್ನು ವಿವರಿಸುತ್ತಿದ್ದಾರೆ. ಧನಾತ್ಮಕ ಹಾಗೂ ಸಂತಸ ಕೊಡುವಂಥ ವರದಿಗಳೇ ಮಿಸ್ ಮಾಲಿನಿಯ ವಿಶೇಷ.
ಕಾ-ಚಿಂಗ್:
2010ರಲ್ಲಿ ಆರಂಭವಾದ ಮಿಸ್ ಮಾಲಿನಿ, ಪ್ರತಿ ತಿಂಗಳು 10,000 ವಿಸಿಟರ್‍ಗಳನ್ನು ಹೊಂದಿದೆ. ಪ್ರತಿ ತಿಂಗಳು 5 ಲಕ್ಷ ಮಂದಿ ಭೇಟಿ ಕೊಡ್ತಾರೆ. ಭಾರತ ಹಾಗೂ ಅಮೆರಿಕದ ಪ್ರಮುಖ ಉದ್ಯಮಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ.
4. ಸ್ಟೈಲ್ ಫಿಯೆಸ್ಟಾ..
ಮಾಸೂಮ್ ಮಿನಾವಾಲಾ ಫ್ಯಾಷನ್ ಜಗತ್ತಿಗೆ ಮಾರುಹೋಗಿದ್ರು. ಅಲ್ಲಿನ ನಿಯಮಗಳನ್ನು ಅರಿಯುವ ಬದಲು ಬದಲಾವಣೆ ತರಲು ಬಯಸಿದ್ರು. ಇದಕ್ಕಾಗಿಯೇ ಸ್ಟೈಲ್ ಫಿಯೆಸ್ಟಾ ಬ್ಲಾಗ್ ಶುರು ಮಾಡಿದ್ರು.
ಸ್ಟೈಲ್ ಫಿಯೆಸ್ಟಾ ಐಡಿಯಾ:
ಮಾಸೂಮ್ ಮೊದಲು ತಮ್ಮ ಫ್ಯಾಷನ್ ಜ್ಞಾನವನ್ನು ಓದುಗರೆದುರು ಇಟ್ರು. ಓದುಗರ ಜೊತೆಗಿನ ಸಂಪರ್ಕ ಅವರಲ್ಲೂ ಫ್ಯಾಷನ್ ಬಗ್ಗೆ ಹೊಸ ಆಯಾಮಗಳನ್ನು ಸೃಷ್ಟಿಸಿತ್ತು.
ಸ್ಟೈಲ್ ಫಿಯೆಸ್ಟಾ ವಿಶೇಷತೆ:
ಚಿಕ್ಕ ವಯಸ್ಸಿನಲ್ಲೇ ಮಾಸೂಮ್ ಸ್ಟೈಲ್ ಫಿಯೆಸ್ಟಾ ಬ್ಲಾಗ್ ಆರಂಭಿಸಿದ್ದಾರೆ. ಅವರೇನೂ ತೀರಾ ಹೈಫೈ ಯುವತಿಯರ ಜೊತೆ ಸ್ನೇಹದಿಂದಿರಲಿಲ್ಲ. ಸಾಮಾನ್ಯರ ಜೊತೆ ಬೆರೆತು ಫ್ಯಾಷನ್‍ಗೆ ಹೊಸ ಟಚ್ ಕೊಟ್ರು. ಬ್ಲಾಗ್ ಮೂಲಕ ಅದನ್ನು ಫ್ಯಾಷನ್ ಪ್ರಿಯರಿಗೆ ಪರಿಚಯಿಸಿದ್ರು.
ಕಾ-ಚಿಂಗ್:
ಅವಕಾಶಗಳನ್ನು ಕಾರ್ಯರೂಪಕ್ಕೆ ತರುವುದೇ ಉದ್ಯಮಿಯ ಬಲು ದೊಡ್ಡ ಸಾಧನೆ. ಮಾಸೂಮ್ ಮಿನಾವಾಲಾ ಮಾಡಿದ್ದು ಕೂಡ ಇದನ್ನೇ. ತಮಗಿಷ್ಟವಾದ ಆಭರಣಗಳ ಆನ್‍ಲೈನ್ ಮಾರಾಟ ಮಾಡಿ ಯಶ ಕಂಡಿದ್ದಾರೆ.
5. ಐಪ್ಲೀಡರ್ಸ್ ಡಾಟ್ ಇನ್
ಕಾರ್ಪೊರೇಟ್ ವಲಯದಲ್ಲಿರುವವರ ಸಮಸ್ಯೆಗಳಿಗೆ ಐ ಪ್ಲೀಡರ್ಸ್ ಡಾಟ್ ಇನ್ ಕನ್ನಡಿ ಹಿಡಿದಿದೆ. ಕಂಪನಿಯ ನೀತಿ-ನಿಯಮ ಎಲ್ಲವನ್ನೂ ಸರಳವಾಗಿ ಪ್ರಕಟಿಸುವ ಮೂಲಕ ಉದ್ಯಮಿಗಳಿಗೆ ನೆರವಾಗುತ್ತಿದೆ. ಕಾನೂನಾತ್ಮಕವಾಗಿ ಸಂಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಕಾಪಾಡಿಕೊಳ್ಳಲು ಐಪ್ಲೀಡರ್ಸ್ ಸಹಕಾರಿಯಾಗಿದೆ.
ಐಪ್ಲೀಡರ್ಸ್ ಐಡಿಯಾ:
ಕಾನೂನು ನಿರ್ವಹಣೆ ಹೊಣೆಗಾರಿಕೆ ದೃಷ್ಟಿಯಿಂದ ಐಪ್ಲೀಡರ್ಸ್ ಆರಂಭವಾಗಿದೆ. ಕಾನೂನು ತೊಡಕು ಎದುರಾಗದಂತೆ ವ್ಯವಹಾರದಲ್ಲಿರುವ ಅಪಾಯಗಳನ್ನು ಗುರುತಿಸಲು ಹಾಗೂ ತೊಡೆದುಹಾಕಲು ನೆರವಾಗುತ್ತಿದೆ. ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಮತ್ತು ಅಪಾಯ ನಿರ್ವಹಣೆ ಬಗ್ಗೆ ಉದ್ಯಮಿಗಳಿಗೆ ಸಲಹೆ ನೀಡುತ್ತಿದೆ.
ಐಪ್ಲೀಡರ್ಸ್ ವಿಶೇಷತೆ:
ಆರಂಭದಲ್ಲಿ ಐಪ್ಲೀಡರ್ಸ್‍ಗೆ ವಿಸಿಟ್ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಕಾನೂನಿನ ಬಗ್ಗೆ ಬರೀತಾ ಇರೋದ್ರಿಂದ ಅದರ ಬಗ್ಗೆ ಜನರಿಗೆ ಆಸಕ್ತಿ ಕಡಿಮೆ. ಹಾಗಾಗಿ ಯಾರೂ ಬ್ಲಾಗ್ ಓದಲು ಇಷ್ಟಪಡುತ್ತಿಲ್ಲ ಎಂದೇ ಭಾವಿಸಲಾಗಿಯತ್ತು. ಆದ್ರೆ ಕೆಲವೇ ದಿನಗಳಲ್ಲಿ ಚಿತ್ರಣವೇ ಬದಲಾಗಿ ಹೋಯ್ತು. ಕಾನೂನು ತೊಡಕುಗಳ ಬಗ್ಗೆ ಮಾಹಿತಿ ಪಡೆಯಲು ಜನರು ಅತ್ಯಾಸಕ್ತರಾಗಿದ್ದಾರೆ ಅನ್ನೋದು ಸಂಸ್ಥಾಪಕ ರಾಮಾನುಜ ಮುಖರ್ಜಿ ಅವರಿಗೆ ಅರಿವಾಗಿತ್ತು.
ಕಾ-ಚಿಂಗ್:
ಜನರಿಗೆ ಪ್ರಾಮಾಣಿಕ ಕಾಳಜಿ ಇರುವ ವಿಷಯದ ಬಗ್ಗೆ ಬ್ಲಾಗ್‍ನಲ್ಲಿ ಬರೆದು ಐಪ್ಲೀಡರ್ಸ್ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಕಾನೂನು ವಿಶ್ವವಿದ್ಯಾಲಯಗಳು ಹಾಗೂ ತಜ್ಞರಿಂದ ಹಿಡಿದು ಎಲ್ಲರೂ ಈಪ್ಲೀಡರ್ಸ್ ಬ್ಲಾಗ್ ಪ್ರಿಯರಾಗಿದ್ದಾರೆ. ಹೀಗೆ ಬ್ಲಾಗ್ ದುನಿಯಾ ಉದ್ಯಮ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ.