ಹೂಡಿಕೆ, ಆವಿಷ್ಕಾರ, ಉದ್ಯಮಶೀಲತೆ - ಇದು ಕರ್ನಾಟಕದ ಗರಿ
ಟೀಮ್ ವೈ.ಎಸ್ ಕನ್ನಡ
ಇಡೀ ವಿಶ್ವದ ಗಮನ ಸೆಳೆದಿರುವ ಹೂಡಿಕೆ ಕರ್ನಾಟಕ - 2016 ಸಮಾವೇಶಕ್ಕೆ ಬೆಂಗಳೂರಿನಲ್ಲಿ ವಿಧ್ಯುಕ್ತ ಚಾಲನೆ ದೊರೆಯಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಪುಟ ಸಹೋದ್ಯೋಗಿಗಳು ಮತ್ತು ಖ್ಯಾತ ಉದ್ಯಮಿಗಳ ಸಮ್ಮುಖದಲ್ಲಿ ಹೂಡಿಕೆ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅರುಣ್ ಜೇಟ್ಲಿ ಹೇಳಿದ್ದೇನು..?
ಸಮಾರಂಭದಲ್ಲಿ ಮನ ತುಂಬಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ, ಕರ್ನಾಟಕ ಹಲವು ವಿಶೇಷ ಗುಣಗಳನ್ನು ಹೊಂದಿದೆ ಎಂದು ಕೊಂಡಾಡಿದರು. ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಕರ್ನಾಟಕದಲ್ಲಿ ಅಗಣಿತವಾಗಿದೆ. ದೇಶದ ಆರ್ಥಿಕ ಬೆಳವಣಿಗೆ ದರಕ್ಕಿಂತ ಶೇಕಡಾ ಎರಡರಷ್ಟು ಹೆಚ್ಚುವರಿ ಸಾಧನೆ ಮಾಡಲು ಕರ್ನಾಟಕಕ್ಕೆ ಎಲ್ಲ ಅವಕಾಶಗಳಿದೆ ಎಂದು ಶ್ಲಾಘಿಸಿದರು.
ದೇಶಪಾಂಡೆ ಅಭಿಪ್ರಾಯವೇನು..?
ಇದೇ ಸಂದರ್ಭದಲ್ಲಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರಾಜ್ಯ ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ, ಇಡೀ ದೇಶದಲ್ಲಿ ಕರ್ನಾಟಕ ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ ಎಂದರು. ಹೂಡಿಕೆ ಸಮಾವೇಶ ಕೇವಲ ತಿಳುವಳಿಕಾ ಒಪ್ಪಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಉದ್ಯಮಿಗಳ ಭೇಟಿಯ ವೇದಿಕೆ ಕೂಡ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಿತಿನ್ ಗಡ್ಕರಿ ಮಾತೇನು..?
ಸಮಾರಂಭದಲ್ಲಿ ಅತಿಥಿಯಾಗಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುವುದಾಗಿ ಪ್ರಕಟಿಸಿದರು. ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದರು. ಶಿರಾಢಿ ಘಾಟ್ ಸೇರಿದಂತೆ ಅಗತ್ಯ ರಸ್ತೆ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡುವುದಾಗಿ ಗಡ್ಕರಿ ಪ್ರಕಟಿಸಿದರು.
ಅನಂತಕುಮಾರ್ ಆಶ್ವಾಸನೆಯೇನು..?
ರಾಜ್ಯದ ಸಂಸದ ಹಾಗೂ ಕೇಂದ್ರ ರಸಗೊಬ್ಬರ ಸಚಿವರಾಗಿರುವ ಅನಂತ ಕುಮಾರ್, ರಾಜ್ಯಕ್ಕೆ ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಯೂರಿಯಾ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಘೋಷಿಸಿದರು. ರಾಜ್ಯ ಸರಕಾರ ಅಗತ್ಯ ಭೂಮಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ , 500 ಎಕರೆ ಭೂಮಿ ನೀಡಲು ಸರ್ಕಾರ ಸಿದ್ಧವಿರುವುದಾಗಿ ವೇದಿಕೆಯಲ್ಲೇ ಘೋಷಿಸಿದರು.
ಇದಕ್ಕೆ ಭಾರೀ ಪ್ರಶಂಸೆ ಕೂಡ ವ್ಯಕ್ತವಾಯಿತು.
ರಾಜ್ಯಕ್ಕೆ ಭರಪೂರ ಕೊಡುಗೆ...
ದೇಶದ ಖ್ಯಾತ ಉದ್ಯಮಿಗಳು ಈ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಂಡು, ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿರುವ ರಾಜ್ಯಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಿದರು.
ಕುಮಾರ ಮಂಗಲಂ ಬಿರ್ಲಾ, ಗೌತಂ ಅದಾನಿ, ಇಸ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ, ಅನಿಲ್ ಅಂಬಾನಿ ಸೇರಿದಂತೆ ದೇಶದ ಖ್ಯಾತ ನಾಮ ಉದ್ಯಮಿಗಳು ಕರ್ನಾಟಕದಲ್ಲಿ ಅತ್ಯುತ್ತಮ ಹೂಡಿಕೆ ವಾತಾವರಣ ಇದೆ ಎಂದು ಕೊಂಡಾಡಿದರು.
ಇನ್ ವೆಸ್ಟ್ ಕರ್ನಾಟಕ ಅಂಗವಾಗಿ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಬಂಡವಾಳ ಹೂಡಿಕೆಯ ಸಾಧ್ಯತೆಗಳನ್ನು ಪರಿಚಯಿಸುವ 300ಕ್ಕೂ ಹೆಚ್ಚು ಸ್ಟಾಲ್ ಗಳನ್ನು ನಿರ್ಮಿಸಲಾಗಿದೆ. ಹೂಡಿಕೆ ಸಮಾವೇಶದ ಮೊದಲ ದಿನ ಭರ್ಜರಿ ಯಶಸ್ಸು ಕಂಡಿತು.