ಮುಂಬೈ ಮಹಾನಗರಿಯಲ್ಲಿ ಶಬ್ದಮಾಲಿನ್ಯ, ಮರಳುಗಾರಿಕೆ ವಿರುದ್ಧ ಸಿಡಿದೆದ್ದ ದಿಟ್ಟೆ..!
ಟೀಮ್ ವೈ.ಎಸ್. ಕನ್ನಡ
ಭಾರತದ ಮಹಾನಗರಗಳು.. ಅದ್ರಲ್ಲೂ ಮುಂಬೈನಂತಹ ಹೈಟೆಕ್ ಸಿಟಿಯಲ್ಲಿ ಶಬ್ದಮಾಲಿನ್ಯದಂತಹ ಸಮಸ್ಯೆಗಳು ಎಲ್ಲೆ ಮೀರಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯರ ಬದುಕು ದುಸ್ಥರವಾಗುತ್ತಿದೆ. ಇನ್ನು ಗಾಯದ ಮೇಲೆ ಬರೆ ಅನ್ನೋ ಹಾಗೆ ಎಗ್ಗಿಲ್ಲದೆ ನಡೆಯುವ ಮರಳುಗಾರಿಕೆ ನಗರದ ಜನಜೀವನವನ್ನೇ ನುಂಗಿ ಬಿಡುತ್ತದೆ. ಹೀಗಿದ್ರೂ ಯಾರೂ ಇದ್ರ ಬಗ್ಗೆ ಯೋಚಿಸೋದಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೇ ನಡೆಸುವುದಿಲ್ಲ. ನಮಗ್ಯಾಕೆ ಇಲ್ಲದ ತೊಂದರೆ ಅನ್ನೋ ಮನಸ್ಥಿತಿಯಲ್ಲಿರುವ ಬಹುತೇಕರು ತಮ್ಮ ಸುತ್ತ ಸೃಷ್ಠಿಯಾಗುವ ಸಮಸ್ಯೆಗಳ ಬಗ್ಗೆ ಎಂದಿಗೂ ಯೋಚಿಸುವುದೇ ಇಲ್ಲ. ಆದ್ರೆ ಮುಂಬೈನಲ್ಲಿ ಕೆಲವೇ ಮಂದಿ ಮಾತ್ರ ಈ ಮಾಲಿನ್ಯಗಳ ವಿರುದ್ಧ ಸಿಡಿದೆದ್ದು ಅದಕ್ಕೊಂದು ಪರಿಹಾರ ಕಂಡುಕೊಡುವ ಪ್ರಯತ್ನ ನಡೆಸುತ್ತಿದ್ದಾರೆ. ಆ ಅಪೂರ್ವ ಹೋರಾಟಗಾರ್ತಿ ಹೆಸರು ಸುಮೈರಾ ಅಬ್ದುಲಾಲಿ.. ಮುಂಬೈನಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯ ಹಾಗೂ ಮರಳುಗಾರಿಕೆ ವಿರುದ್ಧ ಸಿಡಿದೆದ್ದಿರುವ ಸುಮೈರಾ, ದೊಡ್ಡ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ಸುಮೈರಾ ಅಬ್ದುಲಾಲಿ ಮೂಲತಃ ಪರಿಸರ ತಜ್ಞರ ಕುಟುಂಬದಲ್ಲೇ ಹುಟ್ಟಿ ಬೆಳೆದು ಬಂದಾಕೆ. ಹೀಗಾಗಿ ಸಹಜವಾಗೇ ಪರಿಸರದ ಬಗ್ಗೆ ಸುಮೈರಾಗೆ ಒಲವು ಹಾಗೂ ಕಾಳಜಿ ಬೆಳೆದು ಬಂದಿತ್ತು. ಹಾಗೇ ಮುಂಬೈನಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನ ತಗ್ಗಿಸಲು ಪಣತೊಟ್ಟಿರುವ ಸುಮೈರಾ ಈ ಹೋರಾಟಕ್ಕಾಗೇ ಆವಾಜ್ ಫೌಂಡೇಷನ್ ಎಂಬ ಎನ್ ಜಿಒವನ್ನ ಹುಟ್ಟುಹಾಕಿದ್ದಾರೆ. ಈ ಎನ್ ಜಿಒದ ಮೂಲಕ ಮುಂಬೈನಲ್ಲಿ ಸೈಲೆಂಟ್ ಝೋನ್ ಹಾಗೂ ಸೇಫ್ ನಾಯ್ಸ್ ಝೋನ್ ಹುಟ್ಟುಹಾಕಲು ಪ್ರಯತ್ನಪಟ್ರು. ಆವಾಜ್ ಮೂಲಕ ಎಗ್ಗಿಲ್ಲದೆ ನಡೆಯುತ್ತಿದ್ದ ಮರಳುಗಾರಿಕೆ ಬಗ್ಗೆ ಬೆಳಕು ಚೆಲ್ಲಿದ್ರು. ಈ ಮೂಲಕ ಅದ್ರಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಗಂಭೀರತೆಗಳನ್ನ ತೆರೆದಿಟ್ಟರು. ಇದೇ ವರದಿಯನ್ನ ಸಮಗ್ರವಾಗಿ ಮುಂಬೈ ಮಿರರ್ ಪತ್ರಿಕೆ ಪ್ರಕಟಿಸಿತು. ಇದು ಸುಮೈರಾ ಹೋರಾಟಕ್ಕೆ ಹೊಸ ದಾರಿ ತೋರಿಸಿತು.
ಇದನ್ನು ಓದಿ: ಕ್ರಿಯೇಟಿವ್ ವರ್ಲ್ಡ್ನಲ್ಲಿ- ಕ್ರಿಯೇಟಿವ್ ವರ್ಕ್..!
ಸುಮೈರಾ ಅವರ ಈ ಹೋರಾಟ ಶುರುವಾಗಿದ್ದು 2002ರಲ್ಲಿ. ಅದು ಅವರ ಅಂಕಲ್ ಅಲಿಬಗ್ ಅವರ ಇಚ್ಛೆಯಂತೆ ಸುಮೈರಾ ಈ ಪ್ರಯತ್ನ ಶುರುಮಾಡಿದ್ರು. ಆದ್ರೆ ಇವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಒತ್ತುವರಿದಾರರು ಇವರ ವಿರುದ್ಧ ತಿರುಗಿ ಬಿದ್ದು ಹಲವು ಕೇಸ್ ಗಳನ್ನ ದಾಖಲಿಸಿದ್ರು. ಆದ್ರೆ ಅದ್ಯಾವುದಕ್ಕೂ ಜಗ್ಗದ ಈ ದಿಟ್ಟೆ ತನ್ನ ಬದುಕನ್ನೇ ಮುಂಬೈನ ಪರಿಸರವನ್ನ ರಕ್ಷಿಸಲು ಮುಡಿಪಾಗಿಟ್ಟರು. “ ನಾನು ಶಬ್ದ ಮಾಲಿನ್ಯ ವಿರುದ್ಧ ಹೋರಾಟ ಶುರುಮಾಡಿದ್ರೂ ಯಾರೂ ಅದ್ರಿಂದಾಗುವ ಪರಿಣಾಮಗಳ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಅವರ ಆರೋಗ್ಯ ಹಾಗೂ ನೆಮ್ಮದಿಗೆ ಹಾನಿಕಾರವಾಗಿರುವ ಶಬ್ದ ಮಾಲಿನ್ಯ ಬಗ್ಗೆ ಯಾರಿಗೂ ಅರಿವೂ ಇರಲಿಲ್ಲ. ಆದ್ರೆ ನಾನೊಬ್ಬಳೇ ಏಕಾಂಗಿಯಾಗಿ ಶಬ್ದ ಮಾಲಿನ್ಯ ಪ್ರಮಾಣವನ್ನ ತೋರಿಸುವ ಮೀಟರ್ ಹಿಡಿದು ಮುಂಬೈನ ಪ್ರಮುಖ ಜಾಗಗಳಲ್ಲಿ ತಿರುಗಾಡಲು ಶುರುಮಾಡಿದೆ. ಟ್ರಾಫಿಕ್, ಸೆಲೆಬ್ರೆಷನ್ ಜಾಗಗಳಿಗೆ ಹೋಗಿ ಅಲ್ಲಿರುವ ಶಬ್ದದ ಪ್ರಮಾಣಗಳನ್ನ ಅಳತೆ ಮಾಡಿದೆ. ಆದ್ರೆ ಆ ಪ್ರಮಾಣವನ್ನ ನೋಡಿ ನಾನು ದಂಗಾಗಿದ್ದೆ ” ಅಂತ ಸುಮೈರಾ ತಮ್ಮ ಹೋರಾಟದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಹೀಗೆ ಹೋರಾಟದ ಹಾದಿ ತುಳಿದ ಸುಮೈರಾ 2006ರಲ್ಲಿ ತಮ್ಮ ಆವಾಜ್ ಗ್ರೂಪನ್ನ ಹುಟ್ಟು ಹಾಕಿದ್ರು. ಇದೊಂದು ಸ್ವಯಂ ಸೇವಕರಿಂದಲೇ ನಡೆಯುತ್ತಿರುವ ಸಂಸ್ಥೆ. ತನ್ನ ಸಂಸ್ಥೆಗೆ ಸೇರ್ಪಡೆಗೊಂಡವರ ನೆರವಿನಿಂದಲೇ ಅವರು ತಮ್ಮ ಪ್ರಯತ್ನಗಳನ್ನ ಮುಂದುವರಿಸಿದ್ರು. ಆದ್ರೆ ಪೊಲೀಸ್ ಸೇರಿದಂತೆ ಹಲವರಿಂದ ನಿರಂತರವಾಗಿ ಇವರ ಪ್ರಯತ್ನಗಳಿಗೆ ಅಡ್ಡಿಪಡಿಸುವ ಕೆಲಸಗಳೇ ನಡೆದವು. ಆಗ ಅವರಿಗೆ ಅರ್ಥವಾಗಿದ್ದು ತಮ್ಮ ಉದ್ದೇಶ ಈಡೇರಬೇಕು ಅಂದ್ರೆ ಅದಕ್ಕೆ ಸರ್ಕಾರದ ಬೆಂಬಲ ಬೇಕೇ ಬೇಕು ಅನ್ನುವ ವಾಸ್ತವ. ಆದ್ರೆ ಸರ್ಕಾರವನ್ನ ಸೆಳೆಯುವುದು ಹೇಗೆ ಹಾಗೂ ಬದಲಾವಣೆಗಳನ್ನ ತರುವುದು ಹೇಗೆ ಅನ್ನೋ ಚಿಂತೆ ಅವರನ್ನ ಕಾಡಿತ್ತು. “ ನನಗೆ ನನ್ನ ಹೋರಾಟಕ್ಕೆ ಬೇಕಾದ ಕಾನೂನಿನ ಜ್ಞಾನ ನನಗಿರಲಿಲ್ಲ. ಆದ್ರೆ ನನಗೆ ಅಡ್ವೋಕೇಟ್ ಈಶ್ವರ್ ನನ್ಕನಿ ಅವರ ಬೆಂಬಲ ಸಿಕ್ಕಿತು. ಹೀಗಾಗಿ ಪರಿಸ್ಥಿತಿಯನ್ನ ಮುಂಬೈ ಹೈಕೋರ್ಟ್ ಗಮನಕ್ಕೆ ತರಲು ಸಾಧ್ಯವಾಯ್ತು. ಇದರಿಂದಲೇ 207ರಲ್ಲಿ ಮಾಲಿನ್ಯ ಕುರಿತ ಕೆಲವು ಕಾನೂನುಗಳು ಬಿಗಿಯಾದವು ” ಅಂತ ಸುಮೈರಾ ಅಬ್ದುಲಾಲಿ ತಮ್ಮ ಹೋರಾಟದ ದಿನಗಳನ್ನ ಮೆಲುಕು ಹಾಕುತ್ತಾರೆ.
ಸುಮೈರಾ ಅಬ್ದುಲಾಲಿ ಸಲ್ಲಿಸಿದ್ದ ಅರ್ಜಿಯನ್ನ ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಹೈಕೋರ್ಟ್ 2009ರಲ್ಲಿ ಶಬ್ದ ಮಾಲಿನ್ಯವನ್ನ ತಡೆಗಟ್ಟಲು ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ ಕೇಂದ್ರ ಮಾಲಿನ್ಯ ನಿಯಂತ್ರಣ ಇಲಾಖೆ ಕೂಡ ಸಕ್ರೀಯವಾಯ್ತು. ಬಳಿಕ ಮುನಿಸಿಪಲ್ ಕಾರ್ಪೋರೇಷನ್ ಶಬ್ದ ರಹಿತ ವಲಯವನ್ನ ಸೃಷ್ಠಿಸಿತು. ಬಳಿಕ ದೊಡ್ಡ ಕ್ರಾಂತಿ ಅನ್ನೋ ಹಾಗೆ ಕೇಂದ್ರ ಸರ್ಕಾರ, ಕೋರ್ಟ್ , ಪೊಲೀಸ್ ಹಾಗೂ ನಾಗರಿಕರಿಂದ ಭಾರೀ ಸ್ಪಂದನೆ ಸಿಕ್ಕಿತು. ಹೀಗೆ ಮುಂಬೈ ಮಹಾನಗರದಲ್ಲಿ ಅಸಾಧ್ಯವಾದುದನ್ನ ಸುಮೈರಾ ತೋರಿಸಿದ್ದಾರೆ. ಮುಂಬೈನಂತಹ ಮಹಾನಗರದಲ್ಲಿ ಏಕಾಂಗಿಯಾಗಿ ಒಬ್ಬಳು ಮಹಿಳೆಯಾಗಿ ತೋರುತ್ತಿರುವ ಪರಿಸರ ಪ್ರಜ್ಞೆ ಹಾಗೂ ಹೋರಾಟ ನಿಜಕ್ಕೂ ಮಾದರಿ.
ಅನುವಾದ – ಸ್ವಾತಿ, ಉಜಿರೆ
1. ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !