ನಮ್ಮ ಬದುಕಿನಲ್ಲಾಗುವ ಕೆಲವು ಬದಲಾವಣೆಗಳು ಕೆಲವೊಮ್ಮೆ ಜೀವನಕ್ಕೊಂದು ಹೊಸ ಅಂದ ನೀಡುತ್ತೆ. ಇನ್ನು ಕೆಲವು ಸಲ ಬದುಕು ಹಾದಿ ತಪ್ಪುತ್ತೆ. ಆದ್ರೆ ನಮ್ಮಲ್ಲಿ ಧೈರ್ಯ ಅನ್ನೋದು ಇದ್ರೆ ನಾವು ಏನ್ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಇಟ್ಟುಮಡು ನಿವಾಸಿ ಶ್ರೀಲತಾ.

ಶ್ರೀಲತಾ ಎಂ.ಟೆಕ್. ಪದವೀಧರೆ. ಡಿಜಿಟಲ್ ಎಲೆಕ್ಟ್ರಾನಿಕ್ಸ್ ನಲ್ಲಿ ಎಂ.ಟೆಕ್. ಮಾಡಿ ಹುಬ್ಬಳ್ಳಿಯ ಜಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಫ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಂದ್ಯಾಕೋ ಶ್ರೀಲತಾ ಅವರಿಗೆ ಶಿಕ್ಷಕ ವೃತ್ತಿ ಹಿಡಿಸಲಿಲ್ಲ. ಈ ವೇಳೆ ತಮ್ಮಲ್ಲೇ ಇದ್ದ ಆಭರಣ ತಯಾರಿ, ಅಲಂಕಾರಿಕ ವಸ್ತುಗಳ ತಯಾರಿ ಮುಂತಾದ ಹವ್ಯಾಸಗಳನ್ನೇ ಯಾಕೆ ವ್ಯವಹಾರ ಮಾಡಬಾರದು ಅನ್ನೋ ಯೋಚನೆ ಬರಲಾರಂಭಿಸಿತು. ಅದಕ್ಕೆ ನಾದಿನಿ ಸ್ಫೂರ್ತಿಯವರು ನಾನು ಸಾಥ್ ನೀಡುತ್ತೇನೆ ಅಂದೇ ಬಿಟ್ರು. ಅಷ್ಟರಲ್ಲಿ ಮತ್ತೊಬ್ಬ ಸಂಬಂಧಿ ನಾಗಮಣಿ ಅನ್ನೋರು ನನ್ನ ಮತ ನಿಮಗೆ ಅಂದು ಬಿಟ್ರು. ಕೊನೆಗೆ ಮೂವರು ಸೇರಿ ಇಟ್ಟುಮಡುವಿನ ತಮ್ಮ ಮನೆಯಲ್ಲೇ ಎಸ್ ಪಿ ವಿ ಕ್ರಿಯಷನ್ಸ್ ಆರಂಭಿಸಿಯೇ ಬಿಟ್ರು.
ಆರಂಭಿಕ ಹಂತದ ಉದ್ದಿಮೆಗಳಿಗೆ ಹೊಸ ಚೈತನ್ಯ ನೀಡಲಿರುವ ಕೆ-ಸ್ಟಾರ್ಟ್.. !
ಎಸ್ ಪಿ ವಿ ಕ್ರಿಯೇಷನ್ಸ್ ಅಂದ್ರೆ ಶ್ರೀ ಪ್ರಸನ್ನ ವೆಂಕಟ ಕ್ರಿಯೇಷನ್ಸ್ ಅಂತಾ. ಇನ್ನು ಎಸ್ ಪಿವಿ ಕ್ರಿಯೇಷನ್ಸ್ ಟ್ಯಾಗ್ ಲೈನ್ ಅಂತೂ ತುಂಬಾನೇ ಚೆನ್ನಾಗಿದೆ. ಏನಪ್ಪಾ ಅಂದ್ರೆ ನಾರಿ ಶೃಂಗಾರ ಘರ್ ಅಲಂಕಾರ್ ಅಂತಾ.ಅಂದ್ರೆ ಇಲ್ಲಿ ನಾರಿ ಶೃಂಗಾರಕ್ಕೆ ಹಾಗೂ ಮನೆಯ ಅಲಂಕಾರಕ್ಕೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿದೆ ಅಂತಾ. 8 ತಿಂಗಳ ಹಿಂದೆ ಆರಂಭವಾದ ಎಸ್ ಪಿಬಿ ಕ್ರಿಯೇಷನ್ಸ್ ಈಗಾಗಲೇ ಅನೇಕ ಹೆಣ್ಮಕ್ಕಳ ದಿಲ್ ಕದ್ದಿದೆ. ಇಲ್ಲಿ ಶ್ರೀಲತಾ ಅವರು ಮಾರ್ಕೆಟಿಂಗ್ ವ್ಯವಹಾರ ನೋಡಿಕೊಂಡ್ರೆ , ನಾಗಮಣಿ ಅವರು ಡಿಸೈನಿಂಗ್ ಕೆಲಸ ಮಾಡುತ್ತಾರೆ. ಇನ್ನು ಸ್ಫೂರ್ತಿ ಅವರದ್ದು ವಿವಿಧ ಆಭರಣ ಹಾಗೇ ಅಲಂಕಾರಿಕ ವಸ್ತುಗಳ ತಯಾರಿ ಕೆಲಸ.

ಎಸ್ ಪಿ ಪಿ ಕ್ರಿಯೇಷನ್ಸ್ ನಲ್ಲಿ ಮುಖ್ಯವಾಗಿ ಹೆಣ್ಮಕ್ಕಳ ಆಭರಣಗಳಾದ ಕಿವಿಯೋಲೆ, ಬಳೆ, ಸರ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತೆ. ಇನ್ನುಳಿದಂತೆ ಬಟ್ಟೆಯಿಂದ ತಯಾರಿಸಿದ ವಿವಿಧ ಡಾಲ್ ಗಳನ್ನೂ ಇಲ್ಲಿ ತಯಾರಿಸಲಾಗುತ್ತೆ. ಇನ್ನು ಇಲ್ಲಿ ರೆಡಿಯಾದ ಡಾಲ್ ಗಳು ಹೊರದೇಶಗಳಿಗೂ ರವಾನೆಯಾಗಿವೆ. ಅಮೆರಿಕಾ ಮುಂತಾದೆಡೆಗಳಲ್ಲಿ ಎಸ್ ಪಿ ವಿ ಕ್ರಿಯೇಷನ್ಸ್ ನಲ್ಲಿ ರೆಡಿಯಾದ ಗೊಂಬೆಗಳು ಮೆಚ್ಚುಗೆಗೆ ಪಾತ್ರವಾಗಿವೆ.
ಸದ್ಯ ಆಭರಣ ಹಾಗೂ ಅಲಂಕಾರಿಕ ವಸ್ತಗಳ ಉದ್ಯಮದಲ್ಲಿ ಯಶಸ್ಸು ಕಂಡ ಇವರೆಲ್ಲಾ ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಆಕ್ಟಿವಿಟಿ ಸೆಂಟರ್ ಒಂದನ್ನು ತೆರಯಬೇಕು ಅನ್ನೋದು ಇವರ ಮಹಾದಾಸೆ. ಅವಲ್ಲದೇ ಆಲ್ ಲೈನ್ ಮೂಲಕವೂ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಇವರಂತೆ ಅನೇಕ ಮಹಿಳೆಯರು ಇದೇ ರೀತಿ ಸ್ವಉದ್ಯೋಗ ಮಾಡಬೇಕು ಅಂತಾ ಬಯಸುತ್ತಾರೆ .ಆದ್ರೆ ಅವರಿಗೆ ಧೈರ್ಯವಿರೋದಿಲ್ಲ. ಅಂತಹವರಿಗೆ ಶ್ರೀಲತಾ ಅವರು ಹೇಳೋದಿಷ್ಟೇ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಒಮ್ಮೆ ಧೈರ್ಯದಿಂದ ಮುನ್ನುಗಿದ್ರೆ ಖಂಡಿತ ಯಶಸ್ಸು ಸಿಗುತ್ತೆ ಅನ್ನೋದು ಇವರ ಸಲಹೆ.