ಬದುಕಿನ ದಿಕ್ಕು ಬದಲಾಯಿಸಿದ ಡ್ರೈವಿಂಗ್
ನಿನಾದ
ಜೀವನ ಅನ್ನೋದೇ ಹಾಗೇ. ನಾವೊಂದು ಅಂದುಕೊಂಡಿದ್ರೆ ಅಲ್ಲಿ ಇನ್ನೊಂದು ಆಗಿರುತ್ತೆ. ಕೆಲವೊಮ್ಮೆ ಇದು ಬದುಕಿಗೆ ಹೊಸ ತಿರುವು ಕೊಟ್ರೆ ಇನ್ನು ಕೆಲವೊಮ್ಮೆ ಬಿರುಗಾಳಿ ಎಬ್ಬಿಸಿಬಿಡುತ್ತೆ. ಆದರೆ ಜೀವನದಲ್ಲಿ ಬರುವ ಸವಾಲುಗಳನ್ನು ಸರಿಯಾಗಿ ನಿಭಾಯಿಸಿದ್ರೆ ಬದುಕು ಸುಂದರವಾಗಿರುತ್ತೆ ಅನ್ನೋದಕ್ಕೆ ಉತ್ತಮ ಉದಾಹರಣೆ ನಿವಾಸಿ ಶೋಭಾ.

ಹೆತ್ತವರಿಗೆ ಮುದ್ದಿನ ಮಗಳಾಗಿದ್ದ ಶೋಭಾ ಅವರನ್ನು ಒಂಭತ್ತನೇ ತರಗತಿಯಲ್ಲಿರುವಾಗಲೇ ಅತ್ತೆಯ ಮಗನ ಜೊತೆ ವಿವಾಹ ಮಾಡಿಸಿದ್ರು ಅಪ್ಪ. ಶೋಭಾ ಅವರದ್ದು ನೇಕಾರಿಕೆ ಮಾಡುವ ಕುಟುಂಬ. ಪತಿ ಸೀರೆ ವ್ಯಾಪಾರ ಮಾಡುತ್ತಿದ್ದರು. ವಿವಾಹವಾದ ಆರಂಭದಲ್ಲಿ ಕೂಡ ಕುಟುಂಬದಲ್ಲಿ ವಾಸವಿದ್ದ ಶೋಭಾ ಅವರು ಬಳಿಕ ಅನಿವಾರ್ಯ ಕಾರಣಗಳಿಂದ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ರು. ಪ್ರತ್ಯೇಕ ಕುಟುಂಬ ಆರಂಭಿಸಿದ ಬಳಿಕ ಶೋಭಾ ಅವರಿಗೆ ಜೀವನ ನಡೆಸೋದು ಕಷ್ಟವಾಯಿತು. ಪತಿ ಕೆಲಸದಲ್ಲಿ ಕೈಜೋಡಿಸೋದು ಅನಿವಾರ್ಯವಾಯ್ತು. ಪ್ರತಿದಿನ ಹತ್ತಾರು ಕಡೆ ಓಡಾಡಬೇಕಾಯ್ತು. ಆಟೋದಲ್ಲಿ ದಿನನಿತ್ಯ ಓಡಾಡೋದು ಅವತ್ತಿನ ಪರಿಸ್ಥಿತಿಯಲ್ಲಿ ಶೋಭಾ ಅವರಿಗೆ ಕಷ್ಟವಾಗಿತ್ತು. ಆವಾಗಲೇ ಶೋಭಾ ಅವರಿಗೆ ಹೊಳೆದದ್ದು ತಾನೂ ಯಾಕೆ ಡ್ರೈವಿಂಗ್ ಕಲಿಯಬಾರದು ಅಂತಾ.

ಮನೆಯಲ್ಲಿದ್ದ ಕೆಲ ಕಟ್ಟುಪಾಡುಗಳಿಂದಾಗಿ ಶೋಭಾಗೇ ಎಲ್ಲಾ ಕಡೆ ಹೋಗಿ ಡ್ರೈವಿಂಗ್ ಕಲಿಯುವ ಅವಕಾಶವಿರಲಿಲ್ಲ. ಮಹಿಳಾ ಚಾಲಕಿಯರ ಕೈಯಲ್ಲೇ ಅವರು ಡ್ರೈವಿಂಗ್ ಕಲಿಯಬೇಕಿತ್ತು. ಅದರಂತೆ ಮುನಿರೆಡ್ಡಿ ಪಾಳ್ಯದಲ್ಲಿರುವ ಡ್ರೈವಿಂಗ್ ಸ್ಕೂಲ್ ಒಂದಕ್ಕೆ ಸೇರಿಕೊಂಡ್ರು. ಅದು ಅವರ ಬದುಕಿಗೊಂದು ತಿರುವು ನೀಡಿತು. ಆದರೆ ನಾಲ್ಕು ಡ್ರೈವಿಂಗ್ ಹೇಳಿಕೊಟ್ಟ ಶಿಕ್ಷಕಿ ಬಳಿಕ ಬರಲೇ ಇಲ್ಲ. ಶೋಭಾ ಅವರಂತೆ ಇನ್ನೂ ಅನೇಕ ಮಹಿಳೆಯರು ಡ್ರೈವಿಂಗ್ ಕಲಿಯೋದಕ್ಕೆ ಬಂದಿದ್ದರು. ಅವರಿಗೂ ಭಾರೀ ನಿರಾಸೆಯಾಯಿತು. ಕೊನೆಗೆ ನಾಲ್ಕು ದಿನಗಳು ಪಡೆದ ತರಬೇತಿಯನ್ನೇ ಆಧಾರವಾಗಿಟ್ಟುಕೊಂಡು ಶೋಭಾ ಅವರು ಇತರರಿಗೆ ತರಬೇತಿ ನೀಡಲು ಆರಂಭಿಸಿದ್ರು. ಅದು ಬದುಕಿನ ದಿಕ್ಕನ್ನೇ ಬದಲಿಸಿತು. ಅಲ್ಲದೇ ಅದೇ ಧೈರ್ಯದಲ್ಲಿ ಕಾರ್ ಡ್ರೈವಿಂಗ್ ನ್ನೂ ಕಲಿತುಕೊಂಡ್ರು.
ಕಾರು ಡ್ರೈವಿಂಗ್ ಕಲಿತದ್ದೇ ಕಲಿತದ್ದು ಶೋಭಾ ಅವರಿಗೆ ಅಮೇರಿಕಾಗೆ ಹೋಗೋ ಅವಕಾಶ ಸಿಕ್ಕಿತ್ತು. ಅಮೇರಿಕಾದಲ್ಲಿ ವೈದ್ಯೆಯೊಬ್ಬರಿಗೆ ಕಾರು ಚಾಲಕಿಯಾಗಿ ಅಮೇರಿಕಾಗೆ ಹಾರಿಯೇ ಬಿಟ್ರು. ಅಲ್ಲಿ ಎರಡು ವರ್ಷ ದುಡಿದ ಬಳಿಕ ಭಾರತಕ್ಕೆ ವಾಪಸ್ಸಾದ ಶೋಭಾ ಇಲ್ಲಿಯೇ ಎರಡು ಡ್ರೈವಿಂಗ್ ಸ್ಕೂಲ್ ಓಪನ್ ಮಾಡಿದ್ರು. ಇಲ್ಲಿ ಸಾವಿರಾರು ಮಂದಿಗೆ ತರಬೇತಿ ನೀಡುತ್ತಾರೆ ಶೋಭಾ. ಅಲ್ಲದೇ ಯಾರದ್ರೂ ಕಲಿಯುವ ಆಸಕ್ತಿ ತೋರಿಸಿದ್ರೆ ರಾಜ್ಯದ ಬೇರೆ ಬೇರೆ ಕಡೆಗೂ ಹೋಗಿಯೂ ಶೋಭಾ ಡ್ರೈವಿಂಗ್ ಹೇಳಿ ಕೊಡುತ್ತಾರೆ. ಅಲ್ಲದೇ ಕಷ್ಟದಲ್ಲಿರೋ ಮಹಿಳೆಯರಿಗೂ ಶೋಭಾ ಸಹಾಯ ಮಾಡುತ್ತಾರೆ.

ಮಹಿಳೆಯರು ಧೈರ್ಯದಿಂದ ಮುನ್ನುಗಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವ ಶೋಭಾ ವಿದ್ಯೆಯಿಲ್ಲದಿದ್ದರೂ ಧೈರ್ಯವೊಂದಿದ್ದರೆ ಏನ್ ಬೇಕಾದ್ರೂ ಸಾಧಿಸಬಹುದು ಅಂತಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳೆಯರಿಗಾಗಿಯೇ ಟ್ಯಾಕ್ಸಿ ಸೇವೆ ಆರಂಭಿಸಬೇಕು ಅನ್ನೋ ಯೋಜನೆಯಲ್ಲಿದ್ದಾರೆ ಶೋಭಾ. ಅವರ ಆ ಯೋಜನೆ ಆದಷ್ಟು ಬೇಗ ಈಡೇರಲಿ ಅಂತಾ ನಾವು ಕೂಡ ಹಾರೈಸೋಣ.
ಇನ್ನು ನೀವೇನಾದ್ರೂ ಡ್ರೈವಿಂಗ್ ಕಲಿಯಲು ಇಚ್ಛಿಸಿದ್ರೆ ಶೋಭಾ ಅವರನ್ನು ಸಂಪರ್ಕಿಸಬಹುದು . ಶೋಭಾ ಅವರ ದೂರವಾಣಿ ಸಂಖ್ಯೆ: 9036941624
ಇದನ್ನು ಓದಿ:
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದೇಶದಲ್ಲಿ 3ನೇ ಸ್ಥಾನ