
ಕಸದಿಂದ ರಸ ಅನ್ನೋ ಮಾತಿಗೆ ನಮ್ಮಲ್ಲಿ ಹಲವು ಉದಾಹರಣೆಗಳು ದೊರೆಯುತ್ತವೆ. ಆದ್ರೆ ಕಸದಿಂದ ರಸ ಮಾಡಿ ಅದರ ಮೂಲಕ ಸಮಾಜಮುಖೀ ಕೆಲಸಗಳನ್ನು ಮಾಡೋದು ಅಂದ್ರೆ ಅದು ವಿಶೇಷವೇ ಸರಿ. ಹೌದು, ಬೆಂಗಳೂರಿನಲ್ಲಿ ಮೂವರು ಸಮಾನಮನಸ್ಕ ಮಹಿಳೆಯರು ಒಂದಾಗಿ ಕಳೆದ ಕೆಲ ವರ್ಷಗಳಿಂದ ಅಂತಹ ಕೆಲಸವನ್ನು ಎಲೆಮರೆ ಕಾಯಿಗಳಂತೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮದೇ ರೀತಿಯಲ್ಲಿ ಸಮಾಜಕ್ಕೆ ಹಾಗೂ ಪ್ರಕೃತಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ರಿ-ಇನ್ವೆನ್ಷನ್ ಅಥವಾ ಪುನರ್ಶೋಧನೆ
ಹಲವು ವರ್ಷಗಳಿಂದ ಧರಿಸಿ ಹಳೆಯದಾದ ಅಚ್ಚುಮೆಚ್ಚಿನ ಸೀರೆ, ವೇಗವಾಗಿ ಬೆಳೆಯುವ ಮಕ್ಕಳ ಬಾಲ್ಯದ ಬಟ್ಟೆಗಳು... ಎಂಥವರಿಗೇ ಆಗಲೀ ತುಂಬಾ ಇಷ್ಟ. ಹೀಗಾಗಿಯೇ ಸಾಮಾನ್ಯವಾಗಿ ಹಳೆಯದಾದ್ರೂ, ತುಂಡವೆನಿಸಿದ್ರೂ ಆ ಬಟ್ಟೆಗಳನ್ನು ಬೀರುವಿನ ಒಂದು ಮೂಲೆಯಲ್ಲಿ ಜೋಪಾನವಾಗಿ ಇಟ್ಟಿರ್ತೀವಿ. ಆದ್ರೆ ಆ ಬಟ್ಟೆ ಮುಂದೆಂದೂ ನಮಗೆ ಉಪಯೋಗಕ್ಕೆ ಬಾರದೇ ಹಾಗೇ ಜಿರಲೆಯೋ ಅಥವಾ ಇಲಿಗಳಿಗೆ ಆಹಾರವಾಗಿಬಿಡ್ತವೆ. ಆದ್ರೆ ಅಂತಹ ಬಟ್ಟೆಗಳನ್ನು ರಕ್ಷಿಸುವ ಹಾಗೂ ಮತ್ತೆ ಬಳಸುವ ಮೂಲಕ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡುವ ಕೆಲಸವೊಂದು ಸದ್ದಿಲ್ಲದೇ ನಡೀತಿದೆ. ಅದೇ ರೀಇನ್ವೆನ್ಷನ್ ಅಥವಾ ಪುನರ್ಶೋಧನೆ.

ಓಲ್ಡ್, ಗೋಲ್ಡ್ ಆಗೋದು ಹೀಗೆ?
ಚಿತ್ರ ಗುಪ್ತಾ, ವರ್ಷಾ ಕರಿಯಾ ಹಾಗೂ ಪ್ರಚಲಾ ಅನುಪಮೇಯ, ಮೂವರೂ ಸೇರಿ ರೀಇನ್ವೆನ್ಷನ್ ಮೂಲಕ ಹಳೆಯ ಬಟ್ಟೆಗಳಿಗೆ ಹೊಸ ರೂಪ ಕೊಡುತ್ತಿದ್ದಾರೆ. ಈ ಮೂಲಕ ಬೀರುವಿನ ಮೂಲೆಯಲ್ಲಿದ್ದ, ಅಥವಾ ಕಸದೊಂದಿಗೆ ಸೇರಬೇಕಿದ್ದ ಹಳೆಯ ಬಟ್ಟೆಗಳನ್ನು ಪುನರ್ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದು ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಹಾಗೂ ಪರಸರ ಸಂರಕ್ಷಿಸಲು ತಮ್ಮದೇ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಅಂದ್ಹಾಗೆ ರೀಇನ್ವೆನ್ಷನ್ ಪ್ರಾರಂಭವಾಗಿದ್ದು 2014ರ ಫೆಬ್ರವರಿಯಲ್ಲಿ. ಮೊದಲು ಚಿತ್ರ, ವರ್ಷಾ ಹಾಗೂ ಪ್ರಚಲಾರಿಗೆ ಜನರಿಂತ ಅಷ್ಟಾಗಿ ಬೆಂಬಲ ಸಿಗಲಿಲ್ಲ. ಹಾಗಂತ ಮಾತಿನ ಮೂಲಕ ಈ ಹುಡುಗಿಯರು ಜನರಿಗೆ ಮನವರಿಕೆ ಮಾಡಿಕೊಡಲು ಮುಂದಾಗಲಿಲ್ಲ. ಬದಲಿಗೆ ತಮ್ಮ ಪ್ರತಿಭೆಯನ್ನು ಉಪಯೋಗಿಸಿ ಹಲವು ಹಳೆಯ ಬಟ್ಟೆಗಳಿಗೆ ನಾನಾ ರೂಪಗಳನ್ನು ಕೊಟ್ಟು ಆ ಮೂಲಕ ಜನರನ್ನು ಸೆಳೆಯತೊಡಗಿದ್ರು. ಹಳೆಯ ಬಟ್ಟೆಗಳಿಗೆ ಹೀಗೆ ಹೊಸ ರೂಪ ಕೊಡುವುದನ್ನು ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಆಲೋಚನೆ ಇವರದು.
ಹಳೆಯ ಬಟ್ಟೆಗಳನ್ನೇ ಉಪಯೋಗಿಸಿಕೊಂಡು ಇಲ್ಲಿ ಹೊಸ ವಸ್ತುಗಳನ್ನು ತಯ್ಯಾರಿಸಲಾಗುತ್ತೆ. ಬೆಡ್ಶೀಟ್, ಪೌಚ್ಗಳು, ಬ್ಯಾಗ್, ಕರ್ಟನ್ಗಳು, ಕುಶನ್ ಕವರ್, ತಲೆದಿಂಬು, ಯೋಗ ಮ್ಯಾಟ್, ಚಿಕ್ಕಮಕ್ಕಳಿಗೆ ಸ್ಕರ್ಟ್, ಗೊಂಬೆಗಳು ಸೇರಿದಂತೆ ಇನ್ನೂ ಹಲವಾರು ದೈನಂದಿನ ಬಳಕೆಯ ವಸ್ತುಗಳನ್ನು ಮಾಡಲಾಗುತ್ತೆ. ಆ ಮೂಲಕ ಬೀರು ಸೇರಿದ್ದ ಅಥವಾ ಮನೆ, ವಾಹನ ಒರೆಸಲು ಸೀಮಿತವಾಗಬೇಕಿದ್ದ ಹಳೆಯ ಬಟ್ಟೆಗಳನ್ನು ಪುನರ್ಬಳಕೆ ಮಾಡಲಾಗುತ್ತಿದೆ.

ಬಂದ ಹಣದಿಂದ ಕೆರೆಗೆ ಕಾಯಕಲ್ಪ
ಹೀಗೆ ಹಳೆಯ ಬಟ್ಟೆಗಳಿಗೆ ಹೊಸ ರೂಪ ಕೊಟ್ಟು, ಅದನ್ನು ಮಾರಾಟ ಮಾಡಲಾಗುತ್ತೆ. ಅದರಿಂದ ಬಂದ ಹಣವನ್ನು ವಿಭೂತಿಪುರ ಕೆರೆಯ ಅಭಿವೃದ್ಧಿಗೆ ನೀಡುತ್ತಿರೋದು ರೀಇನ್ವೆನ್ಷನ್ ತಂಡದ ವಿಶೇಷತೆ. ಸುಮ್ಮನೆ ಕೈಗೆ ಸಿಕ್ಕ ಬಟ್ಟೆಯನ್ನೆಲ್ಲಾ ಬಳಸಿ, ಮನಸ್ಸಿಗೆ ಬಂದ ವಸ್ತುಗಳನ್ನು ತಯ್ಯಾರಿಸೋದಿಲ್ಲ ಇವರು. ಬದಲಿಗೆ ಯಾರಿಂದಲಾದ್ರೂ ಬೇಡಿಕೆ ಬಂದ್ರೆ ಮಾತ್ರ ಆಯಾ ವಸ್ತುಗಳನ್ನು ಡಿಸೈನ್ ಮಾಡಿ ಮಾರಾಟ ಮಾಡ್ತಾರೆ. ‘ಹೀಗೆ ಹಳೆಯ ಬಟ್ಟೆಗಳನ್ನು ಬಳಸಿಕೊಂಡೇ ಸುಮಾರು 200 ಬಗೆಯ ವಸ್ತುಗಳನ್ನು ತಯ್ಯಾರಿಸ್ತೀವಿ’ ಅಂತಾರೆ ವರ್ಷಾ.

‘ಕೆಲವರು ಮತ್ತೊಬ್ಬರು ಧರಿಸಿದ್ದ ಬಟ್ಟೆಗಳಿಂದ ತಯ್ಯಾರಿಸಿದ ವಸ್ತುವನ್ನು ಉಪಯೋಗಿಸಲು ಇಷ್ಟ ಪಡೋದಿಲ್ಲ. ಹೀಗಾಗಿಯೇ ಅವರ ಹಳೆಯ ಬಟ್ಟೆಗಳನ್ನೇ ಪಡೆದು, ಅವುಗಳಿಂದ ಅವರಿಗೇನು ಬೇಕೋ ಅದನ್ನು ಅಚ್ಚುಕಟ್ಟಾಗಿ ತಯ್ಯಾರಿಸಿಕೊಡ್ತೀವಿ. ಮೊದಲು ನಮ್ಮ ಮನೆಯಲ್ಲಿದ್ದ ಬಟ್ಟೆಗಳನ್ನೇ ಮರುಬಳಕೆ ವಸ್ತುಗಳನ್ನಾಗಿ ಮಾಡಿದೆವು. ನಂತರ ನಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರೂ ನಮ್ಮನ್ನು ಸಂಪರ್ಕಿಸಿದ್ರು. ಕ್ರಮೇಣ ರೀಇನ್ವೆನ್ಶನ್ ಕುರಿತು ಹೊರಪ್ರಪಂಚಕ್ಕೂ ಗೊತ್ತಾಗಿ, ಈಗ ಬೇರೆಯವರೂ ಅವರ ಹಳೆಯ ಬಟ್ಟೆಗಳೊಂದಿಗೆ ಬಂದು ನಮ್ಮನ್ನು ಭೇಟಿಯಾಗ್ತಿದ್ದಾರೆ. ಹೀಗೆ ದಿನೇ ದಿನೇ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ’ ಅಂತ ಹೇಳಿಕೊಳ್ಳುತ್ತಾರೆ ವರ್ಷಾ.

‘ನಾನು ಎಂಜಿನಿಯರ್ ಆಗಿದ್ದೆ. ಅದೇ ರೀತಿ ಪ್ರಚಲಾ ಮತ್ತು ಚಿತ್ರ ಕೂಡ ಒಳ್ಳೆಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಈ ಕೆಲಸ ಪ್ರಾರಂಭಿಸಿದ ಬಳಿಕ, ನಮಗೆ ನಮ್ಮ ಕೆಲಸಗಳ ಬಗ್ಗೆ ಗಮನವೇ ಹೋಯ್ತು. ನಮಗೆ ಈ ಕರಕುಶಲ ಕೆಲಸಗಳೇ ಇಷ್ಟವಾಗತೊಡಗಿತು. ಹೀಗಾಗಿಯೇ ಕೆಲಸಗಳನ್ನು ಬಿಟ್ಟು, ಇದನ್ನೇ ಫುಲ್ಟೈಮ್ ಕೆಲಸ ಮಾಡಿಕೊಂಡೆವು. ನಾವು ತಯ್ಯಾರಿಸುವ ಪ್ರತಿಯೊಂದು ವಸ್ತುವೂ ವಿಭಿನ್ನ ಹಾಗೂ ವಿಶೇಷವಾಗಿರ್ತವೆ. ಹೀಗಾಗಿಯೇ ಅವುಗಳಿಗೆ ಬೇಡಿಕೆ ಹೆಚ್ಚು. ನಮ್ಮ ಪ್ರತಿಭೆ, ಶ್ರಮ ಹಾಗೂ ಸಮಯ ಎಲ್ಲವೂ ಒಂದೊಳ್ಳೆ ಕಾರಣಕ್ಕೆ ವಿನಿಯೋಗವಾಗ್ತಿರೋ ಸಮಾಧಾನ ನಮ್ಮದು. ಅಲ್ಲದೇ ಈ ಮೂಲಕ ನಾವು ವಿಭೂತಿಕೆರೆಯ ಜೀರ್ಣೋದ್ಧಾರ ಮಾಡ್ತಿರೋದೂ ಒಂದು ರೀತಿಯ ಸಾರ್ಥಕ ಭಾವನೆ ಮೂಡಿಸಿದೆ.’ ಅಂತ ಖುಷಿಯಾಗುತ್ತಾರೆ ವರ್ಷಾ.