ಮಾತಾಡು ಕನ್ನಡ, ಮಾತನಾಡಿಸು ಕನ್ನಡ...
ಚೈತ್ರ ಎನ್.
- ಸೆಲೆಬ್ರಿಟಿ: ಸಂಚಾರಿ ವಿಜಯ್, ನಟ,ರಾಷ್ಟ್ರಪ್ರಶಸ್ತಿ ಪುರಸ್ಕೃತರು
- ನಿರೂಪಣೆ: ಚೈತ್ರ. ಎನ್

ಸಂಚಾರಿ ವಿಜಯ್, ರಂಗಭೂಮಿ, ಚಲನಚಿತ್ರ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು. ಅವನಲ್ಲ ಅವಳು ಸಿನಿಮಾ ಮೂಲಕ ಈಡಿ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿರುವ ಸಂಚಾರಿ ವಿಜಯ್ ಈ ಬಾರಿ ಬಿ. ಎಸ್. ಲಿಂಗದೇವರುರವರು ನಿರ್ದೇಶಿಸಿರುವ "ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕೆ 62 ನೇ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯಲ್ಲಿ ಅತ್ಯುತ್ತಮ ನಟ ಎಂಬ ಗರಿ ಮುಡಿಗೇರಿಸಿಕೊಂಡವರು, ರಂಗಪ್ಪ ಹೋಗ್ಬಿಟ್ನಾ, ದಾಸವಾಳದಲ್ಲಿ ಅಂಗವಿಕಲ ಪಾತ್ರಧಾರಿಯಾಗಿ , ಹರಿವು ಸಿನಿಮಾದಲ್ಲಿ ರೈತನಾಗಿ, ಒಗ್ಗರಣೆ ಸಿನಿಮಾದಲ್ಲಿ ಮಂಗಳಮುಖಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ ವಿಜಯ್. ಸದ್ಯ ರಾಮ್ ಗೋಪಾಲ್ ವರ್ಮಾ ನಿದೇಶನದ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ತಾವು ಕನ್ನಡವನ್ನು ಕಂಡ ಬಗೆ, ಕನ್ನಡ ಉಳಿಸುವ ಸಾಧ್ಯತೆ ಬಗ್ಗೆ ಯುವರ್ ಸ್ಟೋರಿ ಮುಂದೆ ತೆರೆದುಕೊಂಡಿದ್ದು ಹೀಗೆ.

ಅತ್ತ ನೇತ್ರಾವತಿಯತ್ತ ಎಲ್ಲರ ಚಿತ್ತ
ಇತ್ತ ರೈತನ ಉಸಿರಿಗೆ ಕೈ ಜೋಡಿಸುತ್ತಾ
ಕಳಸ ಬಂಡೂರಿ ಮಹದಾಹಕ್ಕೆ ಜೊತೆಯಾಗುತ್ತಾ
ರಾಜ್ಯೋತ್ಸವ ನಮ್ಮ ಮನೆ ಮನೆ ಅಂಗಳಕೆ ಕಾಲಿರಿಸಿದೆ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ನಮ್ಮ ಆ ಶುಭ ಆಶಯಗಳು ಇನ್ನಾದ್ರೂ ನಿಜವಾಗಲಿ ಅನ್ನೋ ಭರವಸೆಯಲ್ಲಿ ಈ ಬಾರಿಯ ರಾಜ್ಯೋತ್ಸವವನ್ನು ಬರಮಾಡಿಕೊಳ್ಳೊಣ. ಅವನಲ್ಲ ಅವಳು ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ತಂಡಕ್ಕೆ ಹೊಸ ಮೆರುಗು ತಂದ ಕ್ಷಣಗಳು. ಪ್ರಸ್ತುತ ದಿನಗಳಲ್ಲಿ ಕನ್ನಡ ಮತ್ತು ರಾಜ್ಯದ ಹೋರಾಟದ ನಡುವೆಯೂ ಅದೆಷ್ಟೋ ಸಾಮಾಜಿಕ ಸಮಸ್ಯೆಗಳು ಕೆಂಡದಂತೆ ಕುಳಿತಿವೆ. ಇಂತಹ ಸಂದರ್ಭದಲ್ಲಿ ಕನ್ನಡದ ತೇರನ್ನು ಎಳೆಯುವ ಈ ದಿನ ಇನ್ನಷ್ಟು ಅರ್ಥಪೂರ್ಣವಾಗಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಕನ್ನಡವನ್ನು ಉಳಿಸಬೇಕಾಗಿದೆ. ಆ ವಿಷಯದಲ್ಲಿ ಕೊಂಚ ಎಡವುತ್ತಿದ್ದೇವೆ. ವ್ಯಾವಹಾರಿಕ ಭಾಷೆಯಾಗಿ ಕನ್ನಡ ಹೊಮ್ಮಲೇಬೇಕಿದೆ. ಅನ್ಯಭಾಷೆಯ ವ್ಯಕ್ತಿ ಜೊತೆ ವ್ಯವಹರಿಸುವಾಗ ಅವನ ಭಾಷೆಯಲ್ಲೇ ಮಾತನಾಡುವ ನಾವು, ನಮ್ಮ ಭಾಷೆಯನ್ನು ಆತನಿಗೆ ಕಲಿಸುವ ಗೊಡವೆಗೆ ಹೋಗುವುದಿಲ್ಲ. ಇಲ್ಲೆ ನಾವು ಎಡವುತ್ತಿರುವುದು ಅಂತ ನನಗನ್ನಿಸುತ್ತೆ.
ಮೂಲತಹ ಚಿಕ್ಕಮಳೂರಿನವನಾದ ನನಗೆ ಹಸಿರಿನ ಅಂಗಳದಲ್ಲಿ ಅಚ್ಚ ಕನ್ನಡದ ಬಾಲ್ಯ. ಅಲ್ಲಿ ನಾನು ಓದಿದ್ದು ಕನ್ನಡ ಮೀಡಿಯಂ. ಆದರೆ ಬಿಇ ಇಂಜಿನಿಯರಿಂಗ್ ಮಾಡುವಾಗ ಇಂಗ್ಲಿಷ್ ಅನಿವಾರ್ಯವಾಗಿತ್ತು. ಎಲ್ಲಾ ಕನ್ನಡ ಮಿಡಿಯಂ ವಿದ್ಯಾರ್ಥಿಗಳಿಗಾಗುವಂತೆ ನಾನು ಹೆದರಿದ್ದೆ. ಇಂಗ್ಲೀಷ್ ಅರ್ಥ ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಕಣ್ಣಿರು ಹಾಕಿದ್ದಿದೆ. ಕಲಿಯುವಾಗ ಹಿಂಸೆ ಅನಿಸುತ್ತಿತ್ತು. ಆದರೆ ಅದು ಅನಿವಾರ್ಯ. ಇನ್ನು ಬೆಂಗಳೂರಿಗೆ ಬಂದು ಚಿತ್ರನಟನಾದ ಮೇಲೆ ಬೇರೆ ಬೇರೆ ಪ್ರಾದೇಶಿಕ ಭಾಷೆಗಳನ್ನು ಕಲಿಯಲೇಬೇಕು. ಒಬ್ಬ ಉತ್ತಮ ಕಲಾವಿದನಾಗಿ ರೂಪುಗೊಳ್ಳುವಲ್ಲಿ ಇವೆಲ್ಲಾವನ್ನು ಕಲೆ ಬೇಡುತ್ತದೆ. ಕಲಾವಿದನಾಗಿ ಭಾಷೆಯ ಜೊತೆ ನನ್ನ ಬಾಂಧವ್ಯ ಇನ್ನು ಗಟ್ಟಿಯಾಗುತ್ತಲೇ ಇದೆ.
ಕೆಲವೊಮ್ಮೆ ನಾನೊಬ್ಬ ಕನ್ನಡಿಗನಾಗಿ ನನ್ನ ಮಣ್ಣಿನಲ್ಲಿ ನಿಂತಿದ್ದರೂ ಯಾವುದೋ ಕಾಣದೂರಿಗೆ ಬಂದು ಬಿಟ್ಟೆನಾ ಅನ್ನಿಸಿದ್ದು ಉಂಟು. ಭಾಷೆ ಮೌನವಾದಾಗ, ಮಾತು ಕಡಿಮೆ ಮಾಡಿದಾಗ ಈ ಭಾವಗಳು ನನ್ನಲ್ಲಿ ಉದ್ಭವಿಸಿದ್ದುಂಟು. ಮತ್ತದೇ ಮೂಲ ಕಾರಣ ನಾವು ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲೆ ಹೆಚ್ಚು ವ್ಯವಹರಿಸುವಾಗ, ಉಳಿದವರಿಗಿಂತ ನಾವು ಭಿನ್ನವಾಗೋದನ್ನ ಸ್ವೀಕರಿಸುವ ಮನಸ್ಥಿತಿ ಎಲ್ಲರಿಗೂ ಇರುವುದಿಲ್ಲ. ಕೇರಳ, ತಮಿಳುನಾಡು, ಬೆಂಗಳೂರಿನ ಬಾರ್ಡರ್ಗಳಲ್ಲಿ ನೋಡಿ ನಮ್ಮ ಭಾಷೆ ಕನ್ನಡ ಭಾಷೆ ಕೇವಲ 38% ಇರಬಹುದು. ಉಳಿದದ್ದೆಲ್ಲಾ ಅನ್ಯ ಭಾಷೆಯದೇ ಪ್ರಾಬಲ್ಯ. ನಮ್ಮ ಭಾಷೆಯನ್ನು ಕಲಿಯಬೇಕು. ನನಗೆ ಒಂದು ಪ್ರಶ್ನೆ ಬಹಳ ಜನರಿಂದ ಎದುರಾಗುತ್ತಲೇ ಇರುತ್ತದೆ. ನೀವು ಕನ್ನಡದ ಭಾಷೆ ಬದಲು ಬೇರೆ ಭಾಷೆಯಲ್ಲಿ ಇದ್ದಿದ್ರೆ ನಿಮ್ಮಪ್ರತಿಭೆ ಇನ್ನು ಹೆಚು ಮಿನುಗುತ್ತಿತು ಆಂತ. ಅಂತಹ ಸಮಯದಲ್ಲಿ ಇದು ವರವೋ ಶಾಪವೋ ಎಂದು ಕಾಡಿದ್ದಿದೆ.

ಆದರೂ ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ಘಳಿಗೆ ನಾನೊಬ್ಬ ಕನ್ನಡಿಗ ಅನ್ನೋ ಹೆಮ್ಮೆ ನನ್ನಲ್ಲಿ ಕ್ನಡದ ಬಗ್ಗೆ ಹೊಸ ಭರವಸೆಯನ್ನು ಮುಡಿಸಿತ್ತು. ಅನ್ಯ ಭಾಷೆಯ ಎಲ್ಲ ಕಲಾವಿದರೂ ಕನ್ನಡ ಚಿತ್ರರಂಗದ ಕಡೆ ಒಮ್ಮೆ ದೃಷ್ಟಿ ಹಾಯಿಸಿದ್ದು, ನಿಜ್ಕಕೂ ತೃಪ್ತಿ ಮೂಡಿಸಿತ್ತು. ಅ ಕ್ಷಣದಲ್ಲಿ ಕನ್ನಡಕ್ಕಾಗಿ ಇನ್ನು ಹೆಚ್ಚು ಕೆಲಸ ಮಾಡಬೇಕು ಎನ್ನುವ ಹಂಬಲ ಮತ್ತಷ್ಟು ಹೆಚ್ಚಾಗಿದೆ. ಇನ್ನು ಕನ್ನಡ ಉಳಿಸುವ ನಿಟ್ಟಿನಲ್ಲಿ ನಾವು ಕೂಡ ಪ್ರಯತ್ನ ನಡೆಸಬೇಕು. ನಾವು ಬೇರೆ ಭಾಷೆಯವರೊಡನೆ ಅವರ ಭಾಷೆಯೊಂದಿಗೆ ವ್ಯವಹರಿಸುವುದರ ಜೊತೆಗೆ ನಮ್ಮ ಭಾಷೆಯನ್ನು ಅವರಿಗೆ ಕಲಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಕೆಲವೊಮ್ಮೆ ನಾನು ಪ್ರಯತ್ನಿಸುತ್ತೇನೆ. ಒಮ್ಮೆ ಹೀಗೆ ಆಯಿತು. ಆ ಸ್ಥಳ ಯಾವುದೋ ಮರೆತು ಹೋಗಿದೆ. ನಾನು ಶೂಟಿಂಗ್ ಸಲುವಾಗಿ ಯಾವುದೋ ಊರಿಗೆ ಹೋಗಿದ್ದೆ. ಆಗ ಒಂದು ಹೋಟೆಲ್ನಲ್ಲಿ ಊಟಕ್ಕೆಂದು ಹೋದೆವು. ತಿಂಡಿ ಆಗಿದೆಯಾ ಎಂದು ಕೇಳಿದೆವು ಆ ವ್ಯಕ್ತಿ ಅವರ ಭಾಷೆಯಲ್ಲಿ ಹೇಳಿದರು. ನಾವು ಕೂಡಲೆ ಪ್ರಶ್ನೆ ಮಾಡಿದೆವು. ಕನ್ನಡ ಬರೋದಿಲ್ವೆ ನಿಮಗೆ ? ಎಷ್ಟು ವರ್ಷ ಆಯಿತು ಕರ್ನಾಟಕಕ್ಕೆ ಬಂದು? ಎಂದಾಗ ಆತ 15 ವರ್ಷ ಆಯಿತು ಎಂದರು. ನಮಗೆಲ್ಲರಿಗೂ ಆಶ್ಚರ್ಯ. ಏನಪ್ಪಾ ಇಷ್ಟು ವರ್ಷ ಇಲ್ಲೆ ಇದ್ದು ಕನ್ನಡ ಕಲಿತಿಲ್ವೆ ಎಂದು ಪ್ರಶ್ನೆ ಮಾಡಿದೆವು. ನಂತರ ಕನ್ನಡ ಮಾತನಾಡಲು ಪ್ರೇರೆಪಿಸಿದೆವು. ಆತ ಕೂಡ ಉತ್ಸುಕನಾದ. ನಿಜಕ್ಕೂ ನಾವೆಲ್ಲರೂ ಕೈ ಜೋಡಿಸಿದರೆ ಇದು ಸಾಧ್ಯ.
ಇನ್ನು ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಮಾಡಿದ್ದರಿಂದ ಇಲ್ಲಿನ ಪರಿಸರ ನನ್ನನ್ನು ಬಹಳಷ್ಟು ತಿದ್ದಿದೆ. ನನ್ನೊಳಗೆ ಪಾಸಿಟಿವ್ ಎನರ್ಜಿಯನ್ನು ಹುಟ್ಟು ಹಾಕಿದೆ. ಅಷ್ಟೆ ಅಲ್ಲದೇ ಬಾಲ್ಯದಲ್ಲಿ ಶಾಲೆಯಲ್ಲಿ ಕನ್ನಡ ಕಲಿತದ್ದು, ನಂತರ ಕನ್ನಡದ ಸಾಹಿತ್ಯದ ಓದು, ನಾಟಕಗಳಲ್ಲಿ ಅಭಿನಯಿಸಿದ್ದು, ನಾಟಕಗಳನ್ನು ಅಭ್ಯಾಸಿಸಿದ್ದು, ಒಟ್ಟಿನಲ್ಲಿ ಕರ್ನಾಟಕದ ಜನ ಜೀವನ ಮತ್ತು ಕಲೆಯ ಮೇಲಿನ ಪ್ರೀತಿ ಕನ್ನಡವನ್ನು ಮತ್ತಷ್ಟು ಪ್ರೀತಿಸುವಂತೆ ಮಾಡಿತ್ತು. ಇದು ಭಾಷೆ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಿತ್ತು. ಈಗಲೂ ಓದುವ ಅಭ್ಯಾಸ ಮುಂದುವರೆದಿದೆ. ಇನ್ನು ಪ್ರೇಕ್ಷಕನಾಗಿ, ನಟನಾಗಿ ಗುರುತಿಸಿದ ಒಂದು ಅಂಶ ಕನ್ನಡ ಚಿತ್ರರಂಗಕ್ಕೆ ಹೊಸ ವಸಂತ ಶುರುವಾಗಿದೆ. ಹೊಸ ಚಿತ್ರಗಳು ಹೊಸ ಭರವಸೆಯನ್ನು ಮೂಡಿಸುತ್ತಿದೆ. ಇದು ನಿಜಕ್ಕು ಕನ್ನಡಕ್ಕೆ ಒಳ್ಳೆಯ ಬೆಳವಣಿಗೆ.
ಈ ಆಶಯದೊಂದಿಗೆ ನನ್ನ ಮಾತನ್ನು ಮುಗಿಸುತ್ತಿದ್ದೆನೆ. ಬೇರೆ ರಾಜ್ಯದಿಂದ ಬಂದವರಲ್ಲಿ ಒಂದು ಮನವಿ ಮಾತೃ ಭಾಷೆ ಯಾವುದೇ ಇರಲಿ, ನೀವು ಎಲ್ಲಿರುತ್ತೀರಿ, ಎಲ್ಲಿ ಬದುಕುತ್ತೀರಿ, ಬದುಕಲು ಹವಣಿಸುತ್ತೀರಿ, ಬದುಕಲು ತೊಡಗಿಸಿಕೊಳ್ಳುತ್ತೀರಿ ಅಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡುವುದನ್ನು ಅಭ್ಯಸಿಸಿ, ಕನ್ನಡವನ್ನೇ ವ್ವಹಾರಿಕ ಭಾಷೆಯಾಗಿ ಬಳಸಿ.
ಇದು ಆರ್ಡರ್ ಅಲ್ಲ, ರಿಕ್ವೆಸ್ಟ್ . ಆ ಮೂಲಕ ಕನ್ನಡದ ಋಣ ಸಂದಾಯವನ್ನು ಮಾಡುವ ಸೌಹಾರ್ಧತೆ ಇರಲಿ.