Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕರ್ನಾಟಕದ ವನ್ಯಜೀವಿಗಳ ಕಲರವ ‘ವೈಲ್ಡ್‌ ಕರ್ನಾಟಕʼದ ರೂವಾರಿ ಅಮೋಘವರ್ಷರ ಒಂದಷ್ಟು ಮಾತುಗಳು

ಕರ್ನಾಟಕದ ಭವ್ಯ ಜೀವ ವೈವಿಧ್ಯತೆಯನ್ನು ಸೆರೆಹಿಡಿದ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಕುರಿತು ಫಿಲ್ಮ್‌ಮೇಕರ್‌ ಅಮೋಘವರ್ಷರವರ ಒಂದಷ್ಟು ಮಾತುಗಳು ಇಲ್ಲಿವೆ...

ಕರ್ನಾಟಕದ ವನ್ಯಜೀವಿಗಳ ಕಲರವ ‘ವೈಲ್ಡ್‌ ಕರ್ನಾಟಕʼದ ರೂವಾರಿ ಅಮೋಘವರ್ಷರ ಒಂದಷ್ಟು ಮಾತುಗಳು

Saturday February 08, 2020 , 6 min Read

ಹುಲಿಗಳನ್ನು ಬೆನ್ನಟ್ಟುವ ನೀರುನಾಯಿಗಳು, ನೃತ್ಯ ಮಾಡುವ ಕಪ್ಪೆಗಳು ಅಥವಾ ಚಿರತೆ ಬೇಟೆ ಇಂತಹ ಅದ್ಭುತ ದೃಶ್ಯಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ, ಇಂತಹ ದೃಶ್ಯಗಳನ್ನು ಕ್ಷಣ ಕ್ಷಣಕ್ಕೂ ಬೆರಗುಗೊಳಿಸುವ ರೀತಿಯಲ್ಲಿ ಸೆರೆಹಿಡಿಯಲಾಗಿದೆ ವೈಲ್ಡ್‌ ಕರ್ನಾಟಕ ಸಾಕ್ಷ್ಯಚಿತ್ರದಲ್ಲಿ.


ಪಶ್ಚಿಮ ಘಟ್ಟದ ​​ಆರ್ದ್ರ ನಿತ್ಯಹರಿದ್ವರ್ಣ ಕಾಡುಗಳಿಂದ ಹಿಡಿದು, ಮೈಸೂರಿನ ಎಲೆ ಉದುರುವ ಕಾಡು, ರಾಮನಗರದ ಕಲ್ಲುಗಳು ಮತ್ತು ದಾರೋಜಿಯ ಮುಳ್ಳಿನ ಪೊದೆಗಳ ಕಾಡಿನವರೆಗೆ ಹರಡಿರುವ ಭವ್ಯ ಜೀವಿಗಳನ್ನು ಕಲ್ಪಿಸಿಕೊಳ್ಳಿ. ಇಂತಹ ದೃಶ್ಯಗಳಿಂದ ತುಂಬಿರುವ ವೈಲ್ಡ್ ಕರ್ನಾಟಕ ಚಿತ್ರ ಈಗ ಚಿತ್ರಮಂದಿರದಲ್ಲಿದೆ. ಇದು ಭಾರತೀಯ ಚಲನಚಿತ್ರ ವೀಕ್ಷಕರ ಕಣ್ಣಿಗೆ ರಸದೌತನವನ್ನು ಊಣಬಡಿಸುತ್ತಿದೆ.


ಚಿತ್ರ ಬಿಡುಗಡೆಯಾದಾಗಿನಿಂದ ಪಿವಿಆರ್ ಚಿತ್ರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ದಕ್ಷಿಣ ಭಾರತದ ಪಟ್ಟಿಗೆ ಮೂರು ಪಟ್ಟು ಹೆಚ್ಚಿನ ಪ್ರದರ್ಶನಗಳನ್ನು ಸೇರಿಸಿದೆ. ಚಿತ್ರಕ್ಕಾಗಿ ಕೊಡುಗೆದಾರರು ಮಾಡಿದ ಖರ್ಚನ್ನು ಮೀರಿ ಬರುವ ವಿತ್ತೀಯ ಆದಾಯವನ್ನು ಕರ್ನಾಟಕ ಟೈಗರ್ ಫೌಂಡೇಶನ್‌ಗೆ ನೀಡಬೇಕೆಂದು ನಿರ್ಧರಿಸಲಾಗಿದೆ.


ವೈಲ್ಡ್ ಕರ್ನಾಟಕ ಚಿತ್ರವನ್ನು ಕರ್ನಾಟಕ ಅರಣ್ಯ ಇಲಾಖೆ, ಐಕಾನ್ ಫಿಲ್ಮ್ಸ್ ಮತ್ತು ಮಡ್ಸ್ಕಿಪ್ಪರ್ ಸಹಯೋಗದೊಂದಿಗೆ ಪ್ರಶಸ್ತಿ ವಿಜೇತ ಫಿಲ್ಮ್‌ಮೇಕರ್ ಅಮೋಘವರ್ಷ ಜೆ ಎಸ್, ಕಲ್ಯಾಣ್ ವರ್ಮಾ, ಪರಿಸರವಾದಿ ಶರತ್ ಚಂಪತಿ ಮತ್ತು ಭಾರತೀಯ ಅರಣ್ಯ ಅಧಿಕಾರಿ ವಿಜಯ್ ಮೋಹನ್ ರಾಜ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಡೇವಿಡ್ ಅಟೆನ್‌ಬರೋ ಅವರು ಧ್ವನಿಯಾದರೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕ್ಕಿ ಕೇಜ್ ಸಂಗೀತ ಸಂಯೋಜಿಸಿದ್ದಾರೆ.


ವೈಎಸ್ ವೀಕೆಂಡರ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಫಿಲ್ಮ್‌ಮೇಕರ್ ಅಮೋಘವರ್ಷ ಜೆ ಎಸ್ ಚಿತ್ರಿಕರಣದ ಅತ್ಯುತ್ತಮ ಕ್ಷಣಗಳು, ಚಿತ್ರ ಹೇಗೆ ಭಿನ್ನವಾಗಿದೆ ಹಾಗೂ ಅವರು ಎದುರಿಸಿದ ಸವಾಲುಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳ ಕುರಿತು ಮಾತನಾಡಿದರು…


ಅಮೋಘವರ್ಷ ಜೆ ಎಸ್.


ವೈ.ಎಸ್.ವೀಕೆಂಡರ್: ನಿಮ್ಮ ಚಿತ್ರ ವೈಲ್ಡ್ ಕರ್ನಾಟಕದ ಬಗ್ಗೆ ಹೇಳಿ?

ಅಮೋಘವರ್ಷ ಜೆಎಸ್: ವೈಲ್ಡ್ ಕರ್ನಾಟಕವು 2019 ರ ಭಾರತೀಯ ಅಲ್ಟ್ರಾ-ಎಚ್ ಡಿ ನೈಸರ್ಗಿಕ ಇತಿಹಾಸದ ಸಾಕ್ಷ್ಯಚಿತ್ರವಾಗಿದೆ. ಇದು ಕರ್ನಾಟಕದ ಶ್ರೀಮಂತ ಜೀವ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಸಾಕ್ಷ್ಯಚಿತ್ರವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಅಭೂತಪೂರ್ವ ಬೆಂಬಲ ಮತ್ತು ಸಹಭಾಗಿತ್ವದಿಂದ ಚಿತ್ರೀಕರಣ ಮಾಡಲು ಸಾಧ್ಯವಾಗಿದೆ.


52 ನಿಮಿಷಗಳ ಈ ಚಿತ್ರಕ್ಕೆ 1,500 ದಿನಗಳ ನಿರ್ಮಾಣ ಕೆಲಸ, 15,000 ಗಂಟೆಗಳಷ್ಟು ಚಿತ್ರೀಕರಣದ ಸಮಯ ತೆಗೆದುಕೊಂಡಿತು. ಇದರ ಪರಿಣಾಮವಾಗಿ 20 ಕ್ಯಾಮೆರಾಗಳು ಮತ್ತು 50 ಸಿಕ್ವೆನ್ಸ್‌ಗಳಿಂದ 2,400 ನಿಮಿಷಗಳ ದೃಶ್ಯವನ್ನು ಚಿತ್ರೀಕರಿಸಲಾಯಿತು, ಇವೆಲ್ಲವುಗಳನ್ನು ಕರ್ನಾಟಕದ ಭವ್ಯ ಮತ್ತು ಸುಂದರವಾದ ನೈಸರ್ಗಿಕ ಇತಿಹಾಸ, ಪರಂಪರೆಯ ಬಗ್ಗೆ ಜಾಗೃತಿ, ಪ್ರೀತಿ ಮತ್ತು ಗೌರವವನ್ನು ಹರಡುವ ಉದ್ದೇಶದಿಂದ ಚಿತ್ರೀಕರಿಸಲಾಗಿದೆ.


ಚಿತ್ರದಲ್ಲಿನ ನೀರುನಾಯಿಗಳ ಕುಟುಂಬದ ಚಿತ್ರ


ಇದು ಭಾರತೀಯ ಚಿತ್ರ ತಯಾರಕರು, ತಮ್ಮದೇ ನೆಲದ ವನ್ಯಜೀವಿಗಳ ಕಥೆಯನ್ನು ಕೆಲವು ಅದ್ಭುತ ದೃಶ್ಯಗಳ ಮೂಲಕ ಹೇಳುವ ಪ್ರಯತ್ನವಾಗಿದೆ. ಹುಲಿಗಳು, ಏಷ್ಯಾದ ಆನೆಗಳು, ನೀರು ನಾಯಿಗಳು, ಭಾರತೀಯ ಚಿರತೆಗಳು, ಕಾಳಿಂಗ ಸರ್ಪ, ಡ್ರಾಕೊ ಹಲ್ಲಿಗಳು ಮತ್ತು ಪಶ್ಚಿಮ ಘಟ್ಟದ ​​ವೈವಿಧ್ಯಮಯ ಪ್ರಾಣಿಗಳ ಉತ್ತಮ ಗುಣಮಟ್ಟದ ಹಿಂದೆಂದೂ ನೋಡಿರದ 4ಕೆ ಗುಣಮಟ್ಟದ ಚಿತ್ರಣವನ್ನು ಇದರಲ್ಲಿ ಕಾಣಬಹುದು.


ವೈಎಸ್ ಡಬ್ಲ್ಯೂ: ಈ ಚಿತ್ರ ಹೇಗೆ ವಿಭಿನ್ನವಾಗಿದೆ ಮತ್ತು ಇದನ್ನು ಹೇಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ರಿ?

ಎಜೆಎಸ್: ಇದು ಬ್ಲೂ-ಚಿಪ್ ನ್ಯಾಚುರಲ್ ಹಿಸ್ಟರಿ ಡಾಕ್ಯುಮೆಂಟರಿಯ ಅಲ್ಟ್ರಾ ಎಚ್‌ಡಿಯಲ್ಲಿ ಚಿತ್ರೀಕರಿಸಿದ ಸ್ವದೇಶಿ ವೈಶಿಷ್ಟ್ಯವಾದ ಚಿತ್ರ. ತುಂಬಾ ಹೊಸಬರೆ ತಂಡದಲ್ಲಿದ್ದರಿಂದ ಚಿತ್ರಿಕರಣ ಮತ್ತು ವಿತರಣೆ ಮಾಡುವುದು ತಂಡಕ್ಕೆ ವಿಶೇಷವಾಗಿತ್ತು. ಡೇವಿಡ್ ಅವರ ನಿರೂಪಣೆ, ಅತ್ಯಾಧುನಿಕ ತಂತ್ರಜ್ಞಾನ, ಮಹಿಳಾ ಛಾಯಾಗ್ರಾಹಕರ ಪಾಲ್ಗೊಳ್ಳುವಿಕೆ ಅಷ್ಟೇ ಅಲ್ಲದೆ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ವನ್ಯಜೀವಿ ಸಾಕ್ಷ್ಯಚಿತ್ರ ಇದಾಗಿದೆ. ಹೀಗೆ ಚಿತ್ರದ ಒಂದೊಂದು ಅಂಶಗಳು ನಮಗೆ ಪ್ರಮುಖ ಮೈಲಿಗಲ್ಲುಗಳಾದವು.


ಚಿತ್ರಮಂದಿರಗಳಲ್ಲಿ ವೈಲ್ಡ್ ಕರ್ನಾಟಕ ಚಿತ್ರಕ್ಕೆ ಬಂದಂತಹ ಪ್ರತಿಕ್ರಿಯೆಯನ್ನು ನಾವು ಊಹಿಸಿರಲಿಲ್ಲ. ಜನರು ತೋರಿಸಿದ ಪ್ರೀತಿಯು ದಿಗ್ಭ್ರಮೆ ಮೂಡಿಸಿದೆ. ಈ ಪ್ರೀತಿಯ ಅಲೆ ವೈಲ್ಡ್ ಕರ್ನಾಟಕ ಕುಟುಂಬದಂತೆಯೇ ಬೆಳಯಲಿ. ವಾಸ್ತವಿಕ ಮನರಂಜನೆಯ ಮೂಲಕ ಭಾರತದ ದೊಡ್ಡ ಜನಸಂಖ್ಯೆಯ ಒಂದು ಭಾಗವನ್ನು ಪ್ರೇರೇಪಿಸುವುದು ಸಹ ನಮ್ಮ ಗುರಿಯೆಡೆ ಇಟ್ಟ ಪ್ರಗತಿಪರ ಹೆಜ್ಜೆಯಾಗಿದೆ.

ವೈಎಸ್ ಡಬ್ಲ್ಯೂ: ಚಿತ್ರದಲ್ಲಿ ದಾಖಲಾದ ವಿಶೇಷ ಪ್ರಾಣಿಗಳ ವರ್ತನೆಗಳ ಬಗ್ಗೆ ಹೇಳಿ?

ಸಿಂಹ ಬಾಲದ ಮಕಾಕ್ ಕೋತಿ


ಎಜೆಎಸ್: ಹುಲಿಗಳನ್ನು ಬೆನ್ನಟ್ಟುವ ನೀರುನಾಯಿಗಳಿಂದ ಹಿಡಿದು ಭಾರತೀಯ ಚಿರತೆಯ ಬೇಟೆ, ಕಪ್ಪೆಗಳು ನೃತ್ಯ ಮಾಡುವ ದೃಶ್ಯ, ಡ್ರೋನ್ ನಲ್ಲಿ ಚಿತ್ರೀಕರಿಸಲಾದ ಆನೆ ಮತ್ತು ಹುಲಿಗಳು – ಹೀಗೆ ಈ ಚಿತ್ರ ಬಿಚ್ಚಿಡುವ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ವೈಎಸ್‌ಡಬ್ಲ್ಯು: ಕರ್ನಾಟಕದ ಜೀವ ವೈವಿಧ್ಯತೆಯ ಯಾವ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ?

ಎಜೆಎಸ್: ಕರ್ನಾಟಕದ ಪರಿಸರ ವ್ಯವಸ್ಥೆಯು ಪಶ್ಚಿಮ ಘಟ್ಟದ ​​ಆರ್ದ್ರ ನಿತ್ಯಹರಿದ್ವರ್ಣ ಕಾಡುಗಳಿಂದ ಹಿಡಿದು, ಮೈಸೂರಿನ ಎಲೆ ಉದುರುವ ಕಾಡುಗಳವರೆಗೆ, ರಾಮನಗರದ ಕಲ್ಲುಗಳು ಮತ್ತು ದಾರೋಜಿಯ ಮುಳ್ಳಿನ ಪೊದೆಗಳ ಕಾಡಿನವರೆಗೆ, ನದಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳವರೆಗೆ ವ್ಯಾಪಿಸಿ ವಿಭಿನ್ನ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ. ಈ ಎಲ್ಲ ಅಂಶಗಳು ಚಿತ್ರದಲ್ಲಿವೆ.


ಈ ಕಾಡುಗಳಲ್ಲಿ ಭಾರತದ 25% ಆನೆಗಳು ಮತ್ತು 20% ಹುಲಿಗಳಿವೆ. ಇದು ಭೂಮಿಯಲ್ಲಿಯೇ ಕರ್ನಾಟಕವನ್ನು ಅತಿ ಹೆಚ್ಚು ಹುಲಿಗಳು ಮತ್ತು ಏಷ್ಯಾದ ಆನೆಗಳನ್ನು ಹೊಂದಿರುವ ಸ್ಥಳವಾಗಿಸಿದೆ. ಇಷ್ಟೆಲ್ಲಾ ಇದ್ದರೂ ಇವೆಲ್ಲವನ್ನೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕೇವಲ 7 ಗಂಟೆಗಳ ಪ್ರಯಾಣದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ವೈಎಸ್ ಡಬ್ಲ್ಯೂ: ಚಿತ್ರೀಕರಣದ ಕೆಲವು ಪ್ರಮುಖ ಕ್ಷಣಗಳು ಯಾವುವು?

ಕಾಳಿಂಗ ಸರ್ಪವನ್ನು ಚಿತ್ರೀಕರಿಸುತ್ತಿರುವು

ಎಜೆಎಸ್: ಬಹಳ ವಿಶೇಷವಾದ ಹಲವಾರು ಸಂದರ್ಭಗಳಿವೆ. ಆದರೆ ಹುಲಿಗಳನ್ನು ಬೆನ್ನಟ್ಟುವ ನೀರುನಾಯಿ ಮತ್ತು ಲಂಗೂರ್‌ ಕೋತಿಗಳನ್ನು ಚಿರತೆ ಮರದ ಮೇಲೆ ಬೆನ್ನಟ್ಟುವ ದೃಶ್ಯಗಳು ವಿಭಿನ್ನವಾಗಿದ್ದವು ಮತ್ತು ಅನಿರೀಕ್ಷಿತವಾಗಿದ್ದವು. ‌


ವೈಎಸ್ ಡಬ್ಲ್ಯೂ: ಚಿತ್ರೀಕರಣದಲ್ಲಿ ನೀವು ಎದುರಿಸಿದ ಸವಾಲುಗಳೇನು?

ಎಜೆಎಸ್: ಸಾಕ್ಷ್ಯಚಿತ್ರವನ್ನು ತಯಾರಿಸುವಾಗ ನಾವು ಹೆಚ್ಚಾಗಿ ಪ್ರಕೃತಿ ಮತ್ತು ಅದರ ಅನಿರೀಕ್ಷಿತತೆಗೆ ಅನುಗುಣವಾಗಿ ಹೊಂದಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಕಬಿನಿಯಲ್ಲಿ ಆಗುವ ಆನೆಗಳ ಭೇಟಿ ಎರಡು ವರ್ಷಗಳ ಕಾಲ ಆಗಲಿಲ್ಲ. ಜಲಪಾತವನ್ನು ಚಿತ್ರೀಕರಿಸಲು ನಮಗೆ ಎರಡು ವರ್ಷಗಳ ಕಾಲ ಮಳೆಯಾಗಲಿಲ್ಲ. ಜಿಗಣೆಗಳ ಕಚ್ಚಿದ್ದು, ನಿದ್ರೆಯಿಲ್ಲದ ಆ ರಾತ್ರಿಗಳು ಮತ್ತು ರಪ ರಪ ಎಂದು ಸುರಿಯುವ ಬಿರುಸಿನ ಮಳೆಯಲ್ಲಿ ವನ್ಯಜೀವಿಗಳ ಚಿತ್ರೀಕರಣ ಮಾಡಲಾಯಿತು.

ವೈಎಸ್ ಡಬ್ಲ್ಯೂ: ಈ ಚಿತ್ರಕ್ಕೆ ಡೇವಿಡ್ ಅಟೆನ್ಬರೋ ಮತ್ತು ರಿಕ್ಕಿ ಕೇಜ್ ಅವರ ವಿಶೇಷವಾದ ಕೊಡುಗೆ ಏನು?

ಎಜೆಎಸ್: ನೈಸರ್ಗಿಕ ಇತಿಹಾಸಕಾರ ಮತ್ತು ಪ್ರಸಾರಕರಾಗಿ ಸರ್ ಡೇವಿಡ್ ಅಟೆನ್‌ಬರೋ ಅವರ ಕೊಡುಗೆ ಅವರನ್ನು ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ, ಇದು ಒಂದು ತಲೆಮಾರಿನ ವನ್ಯಜೀವಿ ಚಲನಚಿತ್ರ ತಯಾರಕರ ಮೇಲೆ ಪ್ರಭಾವ ಬೀರುತ್ತದೆ. ಮೊದಲ ಭಾರತೀಯ ವನ್ಯಜೀವಿ ಚಲನಚಿತ್ರವನ್ನು ನಿರೂಪಿಸಲು ಡೇವಿಡ್ ಅಟೆನ್‌ಬರೋ ಅವರನ್ನು ಕರೆತರುವುದು ಸುಲಭವಲ್ಲ. ಆದರೆ ಕರ್ನಾಟಕವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕರೆದೊಯ್ಯಲು ಇದು ಬಹಳ ಮುಖ್ಯವಾದದ್ದು ಅನಿಸಿತು. ಅವರು “ಕರ್ನಾಟಕ” “ಶಿವನಸಮುದ್ರ” ಮತ್ತು “ಹಂಪಿ” ತರಹದ ಪದಗಳನ್ನು ಹೇಳುವುದನ್ನು ಕೇಳಿ ಸಂತೋಷವಾಗುತ್ತದೆ!


ಹಸಿರು ಬಳ್ಳಿ ಹಾವು


ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ, ಸಂಗೀತಗಾರ ಮತ್ತು ಪರಿಸರವಾದಿ ರಿಕ್ಕಿ ಕೇಜ್ ಆತ್ಮೀಯ ಸ್ನೇಹಿತ. ಪರಿಸರದ ಬಗೆಗಿನ ಉತ್ಸಾಹ, ಅವರ ಪ್ರತಿಭೆಯ ವಿಶಿಷ್ಟ ಸಂಯೋಜನೆ, ಹಿನ್ನೆಲೆ ಸಂಗೀತಕ್ಕೆ ಇವರಿಗಿಂತ ಹೆಚ್ಚು ಸೂಕ್ತರಾದ ಇನ್ನೊಬ್ಬ ವ್ಯಕ್ತಿ ನಮಗೆ ಸಿಗಲಿಲ್ಲ.


ವೈಎಸ್ ಡಬ್ಲ್ಯೂ: ಕೆಲವು ಪ್ರಮುಖ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಯಿತು?

ಎಜೆಎಸ್: ಸಾಕ್ಷ್ಯಚಿತ್ರದಲ್ಲಿನ ವನ್ಯಜೀವಿಯ ಎಲ್ಲ ನಡವಳಿಕೆಗಳನ್ನು ಮೊದಲ ಬಾರಿಗೆ ಚಿತ್ರೀಕರಿಸಲಾಗಿದೆ ಅಥವಾ ತಿಳಿದಿರುವ ನಡವಳಿಕೆಯನ್ನೆ ಹಿಂದೆಂದೂ ತೋರಿಸದ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಯಾರೂ ನಿರೀಕ್ಷಿಸದ ನೀರುನಾಯಿಗಳು ಹುಲಿಯನ್ನು ನೀರಿನಿಂದ ಹೊರಗೆ ಓಡಿಸುತ್ತಿರುವುದನ್ನು ನಾವು ನೋಡಿದ್ದೇವೆ. ಕರ್ನಾಟಕದ ಹವಳದ ಬಂಡೆಗಳು ಮತ್ತು ತೋಳಗಳನ್ನು ಚಿತ್ರೀಕರಿಸಿದ್ದೇವೆ. ಒಣ ಭೂಮಿ ವೈಮಾನಿಕ ಚಿತ್ರಣವು ಅದ್ಭುತವಾಗಿ ಕಾಣುತ್ತದೆ. ವನ್ಯಜೀವಿಗಳ ನಿಕಟ ಅನುಭವವನ್ನು ನೀಡಲು ನಾವು ಹೊಸ ರಿಗ್‌ಗಳು ಮತ್ತು ತಂತ್ರಜ್ಞಾನವನ್ನು ಬಳಸಿದ್ದೇವೆ. ಆದ್ದರಿಂದ ಇದರಲ್ಲಿ ಎಲ್ಲವೂ ವಿಶಿಷ್ಟವಾಗಿದೆ ಎಂದು ನಾನು ಹೇಳಬಹುದು.


ವೈಎಸ್ ಡಬ್ಲ್ಯೂ: ಚಲನಚಿತ್ರವನ್ನು ನಿರ್ಮಿಸುವಾಗ ಯಾವುದು ನಿಮಗೆ ಹೆಚ್ಚು ಕಷ್ಟಕರವಾಯಿತು?

ಎಜೆಎಸ್: ಪಶ್ಚಿಮ ಘಟ್ಟದಲ್ಲಿ ಕಪ್ಪೆಗಳನ್ನು ಚಿತ್ರೀಕರಿಸುವುದು ಕಷ್ಟಕರವಾಗಿತ್ತು, ಅದರಲ್ಲೂ ವಿಶೇಷವಾಗಿ ಕುಂಬಾರ ಕಪ್ಪೆ ಅದರ ಮೊಟ್ಟೆಗಳ ಮೇಲೆ ಮಣ್ಣನ್ನು ತುಂಬಿಸುತ್ತದೆ. ಈ ಕಪ್ಪೆಗಳನ್ನು ಚಿತ್ರೀಕರಿಸಲು ನಾವು 2 ವರ್ಷಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಅದು ಪೂರ್ತಿಯಾದ ಚಿತ್ರದ ಅಂತಿಮ ಪ್ರತಿಯಲ್ಲಿಲ್ಲ.


ವೈಎಸ್ ಡಬ್ಲ್ಯೂ: ನೀವು ಸ್ವೀಕರಿಸಿದ ಕೆಲವು ಅಂತರರಾಷ್ಟ್ರೀಯ ಮೆಚ್ಚುಗೆ ಮತ್ತು ವಿಮರ್ಶೆಗಳು ಯಾವುವು?

ಎಜೆಎಸ್: ಚಲನಚಿತ್ರವನ್ನು ಇನ್ನೂ ಚಲನಚಿತ್ರೋತ್ಸವಗಳಿಗೆ ತೆಗೆದುಕೊಂಡು ಹೋಗಿಲ್ಲ. ಆದರೆ ಪ್ರಪಂಚದಾದ್ಯಂತದ ವಿಮರ್ಶೆಗಳು ಅತ್ಯುತ್ತಮವಾಗಿವೆ. ನಮ್ಮ ವಿತರಣಾ ಪಾಲುದಾರ ಐಟಿವಿ ಗ್ಲೋಬಲ್‌ನಿಂದ ಕೇನ್ಸ್‌ನಲ್ಲಿ ನಡೆದ ಮಿಪ್‌ಕಾಮ್ ಕಾರ್ಯಕ್ರಮದಲ್ಲಿ ನಮ್ಮ ಚಿತ್ರವನ್ನು ತೋರಿಸಲಾಗಿದೆ.


ವೈಎಸ್‌ಡಬ್ಲ್ಯು: ಪ್ರತಿವರ್ಷ ಹಲವಾರು ವನ್ಯಜೀವಿ ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳು ಹೊರಬರುತ್ತಿವೆ. ಆದರೆ ನಿಮ್ಮ ಚಲನಚಿತ್ರವು ಇಷ್ಟೊಂದು ದೊಡ್ಡದಾಗಲು ಕಾರಣವೇನು?

ಎಜೆಎಸ್: ಎಲ್ಲರ ಸಹಕಾರ, ಸಹಯೋಗವು ಅದನ್ನು ದೊಡ್ಡದಾಗಿಸುತ್ತದೆ. ಇದು ಅರಣ್ಯ ಇಲಾಖೆ, ಪ್ರಾಯೋಜಕರು ಮತ್ತು ರಾಜ್ಯದ 20 ಚಲನಚಿತ್ರ ನಿರ್ಮಾಪಕರ ಒಗ್ಗೂಡಿಸುವಿಕೆಯಾಗಿದೆ. ಖಾಸಗಿ, ಸರ್ಕಾರ ಮತ್ತು ಸಾರ್ವಜನಿಕರಿಂದ ರಾಜ್ಯದ ಎಲ್ಲಾ ಆಯಾಮಗಳು ಅದರ ಒಂದು ಭಾಗವಾಗಿದೆ. ನಮ್ಮ ಕೆಲಸವನ್ನು ಪ್ರದರ್ಶಿಸುವ ಉತ್ಪನ್ನವನ್ನು ನಾವು ಪೂರ್ಣಗೊಳಿಸಿದ್ದೇವೆ. ಇದು ಸುಲಭವಲ್ಲ, ಆದರೆ ಇದು ಸಾಧ್ಯ. ಅದು ನಾವು ಪರಿಗಣಿಸಬೇಕಾದ ಪ್ರವೃತ್ತಿಯಾಗಿದೆ. ಮುಂಬರುವ ವನ್ಯಜೀವಿ ಫಿಲ್ಮ್‌ಮೇಕರ್ಸ್‌ ಗೆ ಸ್ಫೂರ್ತಿ ನೀಡಬೇಕೆಂದು ಅಂದುಕೊಂಡಿದ್ದೇವೆ.


ವೈಎಸ್‌ಡಬ್ಲ್ಯು: ಚಿತ್ರದಲ್ಲಿ ಕಥಾಹಂದರ ಇದೆಯೇ?

ಎಜೆಎಸ್: ಈ ಚಿತ್ರವು ಸಾಕ್ಷ್ಯಚಿತ್ರ ರೂಪದಲ್ಲಿದ್ದರೂ ಕಥೆಯನ್ನು ಹೇಳಿಕೊಂಡು ಹೋಗುತ್ತದೆ. ಕಥೆಯಲ್ಲಿ ಹುಲಿಗಳು ಮತ್ತು ಆನೆಗಳು ಸೇರಿವೆ, ಜೊತೆಗೆ ಸಿಂಹ ಬಾಲದ ಮಕಾಕ್, ಹಾರ್ನ್‌ಬಿಲ್ಸ್, ಉಭಯಚರಗಳು ಮತ್ತು ಸರೀಸೃಪಗಳಂತಹ ವಿವಿಧ ಜಾತಿಗಳ ಪ್ರಾಣಿಗಳು ಸೇರಿವೆ.


ವೈಎಸ್ ಡಬ್ಲ್ಯೂ: ನಿಮ್ಮ ಬಗ್ಗೆ ಮತ್ತು ಹವಾಮಾನ ಬದಲಾವಣೆಯ ಕುರಿತು, ನಿಮ್ಮ ಕೆಲಸದ ಬಗ್ಗೆ ಏನು ಹೇಳುತ್ತಿರಾ? ವನ್ಯಜೀವಿಗಳ ಬಗ್ಗೆ ನಿಮಗೆ ಎಷ್ಟು ಆಸಕ್ತಿ ಇದೆ ಮತ್ತು ಈ ಕೆಲಸವನ್ನು ನೀವು ಎಷ್ಟು ಪ್ರೀತಿಸುತ್ತೀರಿ?

ಭಾರತದ ಚಿರತೆ


ಎಜೆಎಸ್: ನಾನು ಅಮೆಜಾನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಂತರ ಕಾಡಿನ ಪ್ರೀತಿ ನನ್ನನ್ನು ತನ್ನತ್ತ ಸೆಳೆಯಿತು. ತದನಂತರ ವನ್ಯಜೀವಿ ಛಾಯಾಗ್ರಹಣವನ್ನು ವೃತ್ತಿಜೀವನವಾಗಿ ಆಯ್ಕೆಮಾಡಿಕೊಂಡೆ. ಈ ಪ್ರಪಂಚದೊಂದಿಗೆ ಸಂಪರ್ಕಿಸಲು ನನಗೆ ಅವಕಾಶ ದೊರೆಕಿಸಿದ ಈ ಅಪಾರವಾದ ಸೌಂದರ್ಯವನ್ನು ಹಂಚಿಕೊಳ್ಳುವುದು ನನ್ನ ಜವಾಬ್ದಾರಿ ಅಂದುಕೊಂಡಿದ್ದೇನೆ. ನನ್ನ ಸಮಯವನ್ನು ಕಾಡಿನಲ್ಲಿ ಕಳೆದಿದ್ದರಿಂದ ಅದರ ಸಂರಕ್ಷಣೆಯ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ಹವಾಮಾನ ಬದಲಾವಣೆಯಲ್ಲಿಯೂ ರಿಕ್ಕಿ ಕೇಜ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ವೀಕ್ಷಿಸಿದ ನಂತರ ಜನರು ನಮ್ಮ ಭೂಮಿಯನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ.


ವೈಎಸ್ಡಬ್ಲ್ಯೂ: ಈ ತಂಡದಲ್ಲಿ ಎಷ್ಟು ಫಿಲ್ಮ್‌ಮೇಕರ್ಸ್‌ ಇದ್ದರು ಮತ್ತು ಪ್ರತಿಯೊಬ್ಬರ ಕೊಡುಗೆ ಏನು?

ಎಜೆಎಸ್: ತಂಡದಲ್ಲಿ 15 ಕ್ಯಾಮೆರಾಮ್ಯಾನ್‌ಗಳ ಗುಂಪಿತ್ತು. ಪ್ರತಿಯೊಬ್ಬರೂ ವಿಶೇಷವಾದ ಚಿತ್ರೀಕರಣವನ್ನು ಮಾಡಿದರು. ಕೆಲವರು ಡ್ರೈ ಬೆಲ್ಟ್‌ಗಳಲ್ಲಿ ಚಿತ್ರೀಕರಿಸಿದರೆ, ಮತ್ತೆ ಕೆಲವರು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ಚಿತ್ರವನ್ನು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಕಲ್ಯಾಣ್ ಮತ್ತು ನಾನು ಐಕಾನ್ ಫಿಲ್ಮ್ಸ್‌ ಮತ್ತು ಮಡ್‌ಸ್ಕ್ರಿಪರ್ ಜೊತೆಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಿದ್ದೇವೆ.


ವೈ.ಎಸ್.ಡಬ್ಲ್ಯೂ: ಕರ್ನಾಟಕದಾದ್ಯಂತ ನೀವು ಕೈಗೊಂಡ ಪ್ರವಾಸಗಳು ಮತ್ತು ಚಲನಚಿತ್ರದ ಚಿತ್ರೀಕರಣಕ್ಕಾಗಿ ನೀವು ಹೋದ ವಿವಿಧ ಸ್ಥಳಗಳ ಬಗ್ಗೆ ಹೇಳಿ?

ಎಜೆಎಸ್: ನಾನು ರಾಜ್ಯದ ಉದ್ದಗಲಕ್ಕೂ ವ್ಯಾಪಕವಾಗಿ ಪ್ರಯಾಣಿಸಿದ್ದೇನೆ. ಪಶ್ಚಿಮ ಘಟ್ಟ ನನ್ನ ನೆಚ್ಚಿನ ಚಾರಣಗಳಲ್ಲಿ ಒಂದಾಗಿದೆ. ಮಳೆಗಾಲ, ಮಂಜುಗಡ್ಡೆಯ ಪರ್ವತಗಳು ಮತ್ತು ಹಚ್ಚ ಹಸಿರ ಪ್ರದೇಶಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಚಿತ್ರೀಕರಣದ ಸಮಯದಲ್ಲಿಯೂ ಘಟ್ಟಗಳಲ್ಲಿ ಮಳೆಗಾಲವನ್ನೆ ನಾನು ಯಾವಾಗಲೂ ಎದುರು ನೋಡುತ್ತಿದ್ದೆ.


ವೈಎಸ್‌ಡಬ್ಲ್ಯು: ಈ ರೀತಿಯ ಚಲನಚಿತ್ರ ಮಾಡಲು ಮಹತ್ವಾಕಾಂಕ್ಷಿ ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ನೀವು ಕೆಲವು ಸಲಹೆಗಳನ್ನು ನೀಡುವುದಾದರೆ ಅವು ಯಾವವು?

ಎಜೆಎಸ್: ನಾನು ಒತ್ತು ನೀಡುವ ಏಕೈಕ ಪದವೆಂದರೆ ‘ಪರಿಶ್ರಮ’. ವನ್ಯಜೀವಿಗಳ ಕ್ಷೇತ್ರ ಬೇರೆಯದಕ್ಕೆ ಹೋಲಿಸಿದರೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಸತತವಾಗಿ ಪ್ರಯತ್ನಿಸುತ್ತಲೇ ಇರಬೇಕು. ಇದಕ್ಕೆ ತ್ವರಿತ ಫಲಿತಾಂಶಗಳು ಅಥವಾ ಶಾರ್ಟ್‌ಕಟ್‌ಗಳಿಲ್ಲ. ಪ್ರಯತ್ನದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿದ್ದರೆ, ಖಂಡಿತವಾಗಿಯೂ ಯಶಸ್ವಿಯಾಗುವ ಸಾಧ್ಯತೆಗಳಿವೆ.

ವೈಎಸ್ ಡಬ್ಲ್ಯೂ: ನಿಮ್ಮ ಮುಂದಿನ ಚಿತ್ರಗಳು ಯಾವುವು ಮತ್ತು ಭವಿಷ್ಯದಲ್ಲಿ ಈ ಸಾಕ್ಷ್ಯಚಿತ್ರಕ್ಕೆ ಹೋಲುವ ಚಲನಚಿತ್ರ ಮಾಡುವ ಯೋಚನೆಗಳಿವೆಯೆ?

ಎಜೆಎಸ್: ನಾವು ಕೆಲವು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಒಂದು ಮುಂಬೈ (ನಗರ ವನ್ಯಜೀವಿ) ಮತ್ತು ದೇಶಾದ್ಯಂತ ಚಿತ್ರೀಕರಣಗೊಳ್ಳಲಿರುವ ಮತ್ತೊಂದು ಯೋಜನೆ ಕೂಡ ಸಿದ್ಧವಾಗಿದೆ.