ಮನೆಬಾಗಿಲಿಗೆ ಬರುತ್ತೆ ಮನೆ ಮೆಚ್ಚುವ ಮೊಗ್ಗಿನ ಜಡೆ..!
ನೀಲಾಶಾಲು

ಹೇಳಿಕೇಳಿ ಅಲಂಕಾರಕ್ಕೂ ಹೆಣ್ಣಿಗೂ ಬಿಟ್ಟೂ ಬಿಡದ ಸಂಬಂಧ. ಇನ್ನು ಮದುಮಗಳಿಗೆ ಅಲಂಕಾರ ಮಾಡುವುದು ಅಂದ್ರೆ ಅದು ದೊಡ್ಡ ಕೆಲಸ. ಮೇಕಪ್ನಿಂದ ಹಿಡಿದು ಮೊಗ್ಗಿನ ಜಡೆಯ ತನಕ ಎಲ್ಲವೂ ಬಹಳ ನಿಗವಿಟ್ಟು ಮಾಡಬೇಕು. ಅದ್ರಲ್ಲೂ ಮದಮಗಳಿಗೆ ಮೊಗ್ಗಿನ ಜಡೆ ಹಾಕಬೇಕು ಅಂದ್ರೆ ಮೂರರಿಂದ ನಾಲ್ಕು ಜನರ ಸಹಾಯ ಬೇಕೇ ಬೇಕು. ಆದ್ರೆ ಇನ್ನು ಮುಂದೆ ಆ ತಲೆ ನೋವು ಇಲ್ಲ. ಜಸ್ಟ್ ಒಂದು ಮೆಸೇಜ್ ಮಾಡಿದ್ರೆ ಸಾಕು. ನಿಮಗೆ ಬೇಕಾದ ಮೊಗ್ಗಿನ ಜಡೆ ನಿಮ್ಮ ಮನೆಗೆ ಬಂದು ಬಿಡುತ್ತದೆ.

ಅದು ಹೇಗೆ ಅಂತೀರಾ…?
ದಿನದಿಂದ ದಿನಕ್ಕೆ ಆನ್ಲೈನ್ ಮೂಲಕವೇ ವಸ್ತುಗಳನ್ನು ಪೂರೈಕೆ ಮಾಡುವ ವೆಬ್ ಸೈಟ್ ಗಳು ಜನಪ್ರಿಯಗೊಳುತ್ತಿದೆ. ಅಂತಹದೇ ಒಂದು ನೂತನ ವೆಬ್ ಸೈಟ್ ಈಗ ಬಹಳ ಜನಪ್ರಿಯವಾಗುತ್ತಿದೆ. ಅದು ಮೊಗ್ಗಿನ ಜಡೆ ವೆಬ್ ಸೈಟ್.

ಹೆಣ್ಣುಮಕ್ಕಳಿಗೆ ಬಹಳ ಪ್ರಿಯವಾದ ಮೊಗ್ಗಿನ ಜಡೆ ಪೂರೈಕೆಗಾಗಿಯೇ ಬೆಂಗಳೂರಿಗೆ ಜೆ.ಪಿ. ನಗರದಲ್ಲಿರುವ ರೇಣುಕಾ ಪ್ರಕಾಶ್ ಅವರು 150 ರೀತಿಯ ಮೊಗ್ಗಿನ ಜಡೆಯನ್ನ ವಿನೂತನವಾಗಿ ವಿನ್ಯಾಸಗೊಳಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಆನ್ಲೈನ್ ಮೂಲಕ ನಿಮಗೆ ಬೇಕಾದ ಮೊಗ್ಗಿನ ಜಡೆ ಬುಕ್ ಮಾಡಿದ್ರೆ ಸಾಕು, ನಿಮ್ಮ ಮನೆ ಬಾಗಿಲಿಗೆ ಕೆಲವೇ ಗಂಟೆಗಳಲ್ಲಿ ನಿಮ್ಮ ಮೊಗ್ಗಿನ ಜಡೆ ಬಂದು ಬಿಡುತ್ತದೆ. ಇನ್ನು ಇವರು ನೀಡುವ ರೆಡಿಮೇಡ್ ಮೊಗ್ಗಿನ ಜಡೆಯನ್ನ ಬಹಳ ಸುಲಭವಾಗಿ ಯಾರು ಬೇಕಾದ್ರೂ ಫಿಕ್ಸ್ ಮಾಡಬಹುದು. ಅದಕ್ಕೆ ವಿಶೇಷ ತರಬೇತಿ ಪಡೆಯಬೇಕಾದ ಅಗತ್ಯವು ಸಹ ಇಲ್ಲ.

ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಆರತಕ್ಷತೆ, ಸೀಮಂತ, ಹುಟ್ಟು ಹಬ್ಬಗಳಂತಹ ಸಮಾರಂಭಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಮೊಗ್ಗಿನ ಜಡೆ ಇಷ್ಟಪಡುತ್ತಾರೆ. ಅಂತಹವರಿಗಾಗಿ ತಾಜಾ ಹೂವಿನಿಂದ ನಾನಾ ರೀತಿಯಲ್ಲಿ ವಿನ್ಯಾಸಗೊಳಿಸಿರುವ ರೆಡಿಮೇಡ್ ಜಡೆ, ನೆಟ್ಟೆಡ್ ಜಡೆ, ಮಿಕ್ಸ್ ಮ್ಯಾಚ್ ಜಡೆ ಹೀಗೆ ಗ್ರಾಹಕರು ಬಯಸುವ ಬಣ್ಣ ಬಣ್ಣದ ಹರಳುಗಳು ಹಾಗೂ ಮತ್ತುಗಳ ಜಡೆ ಜೊತೆಗೆ ಘಮ್ಮೆನ್ನುವ ಮಲ್ಲಿಗೆ, ಆಕರ್ಷಿಸುವ ಗುಲಾಬಿಗಳಷ್ಟೇ ಅಲ್ಲದೆ ಅಪರೂಪದ ಹೂವುಗಳನ್ನೆಲ್ಲಾ ಸೇರಿಸಿ ಇವರು ಮೊಗ್ಗಿನ ಜಡೆ ತಯಾರಿಸುತ್ತಾರೆ. ನಿಮಗೆ ಯಾವ ಸ್ಟೈಲ್ ಇಷ್ಟವಾಗುತ್ತದೋ ಆ ಸ್ಟೈಲ್ನ ಮೊಗ್ಗಿನ ಜಡೆಯನ್ನು ಇವರು ತಯಾರಿಸಿ ಕೊಡುತ್ತಾರೆ.
