ಜಪಮಾಲೆಗೆ ಫ್ಯಾಷನ್ ಟಚ್ –ಕಾಶಿ ಗ್ರಾಮಗಳಲ್ಲಿ ಮೋದಿ ಸ್ಟಾರ್ಟ್ ಅಪ್ ಇಂಡಿಯಾ ಕನಸು ನನಸು
ಟೀಮ್ ವೈ.ಎಸ್. ಕನ್ನಡ
ಜಗತ್ತು ಬದಲಾಗ್ತಾ ಇದೆ. ಈ ಬದಲಾವಣೆಯ ಗಾಳಿ ವಾರಣಾಸಿಯ narottampur ಗ್ರಾಮಕ್ಕೂ ಬೀಸಿದೆ. ಇಷ್ಟು ದಿನ ಮುಸುಕು ಧರಿಸಿ ಓಡಾಡ್ತಿದ್ದ ಹಳ್ಳಿಯ ಮಹಿಳೆಯರು ಈಗ ಉದ್ಯೋಗ ಶುರುಮಾಡಿದ್ದಾರೆ. ಇದರ ಮೂಲಕ ಸಬಲೀಕರಣದ ಹೊಸ ಅಧ್ಯಾಯ ಬರೆಯುತ್ತಿದ್ದಾರೆ. ಈ ಮಹಿಳೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಕನಸನ್ನು ನನಸುಗೊಳಿಸುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.

Narottampur ಗ್ರಾಮದ ಮಹಿಳೆಯರ ಬಗ್ಗೆ ಹೇಳುವ ಮೊದಲು ನಿಮಗೆ ಪರಿಚಯಿಸಬೇಕಾಗಿದ್ದು ಫ್ಯಾಷನ್ ಡಿಸೈನರ್ ಶಿಪ್ರಾ ಶಾಂಡಿಲ್ಯ ಅವರನ್ನು. ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಶಿಪ್ರಾ, ದೆಹಲಿ ಹಾಗೂ ನೋಯ್ಡಾದಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಬನಾರಸ್ ಗೆ ಬಂದ ಅವರು ಇಲ್ಲಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದಾರೆ. ಮಹಿಳೆಯರ ಕೌಶಲ್ಯದ ಬಗ್ಗೆ ಅರಿತಿರುವ ಶಿಪ್ರಾ ಅದನ್ನು ಹೊರಗೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಗುರುತನ್ನು ಮರಳಿ ನೀಡುವ ಯತ್ನ
ದಶಕಗಳಿಂದ ಬನಾರಸ್ ನಲ್ಲಿ ಕಟ್ಟಲಾಗ್ತಿರುವ ಜಪಮಾಲೆಯನ್ನು ಫ್ಯಾಷನ್ ರೂಪಕ್ಕೆ ಪರಿವರ್ತಿಸಿ ದೊಡ್ಡ ವ್ಯಾಪಾರ ಆರಂಭಿಸಿದ್ದಾರೆ ಶಿಪ್ರಾ. ನಶಿಸುತ್ತಿರುವ ಜಪಮಾಲೆಗಳನ್ನು ಭಾರತೀಯ ಕಲೆ ಹಾಗೂ ಸಂಸ್ಕೃತಿಯ ರೂಪದಲ್ಲಿ ಉಳಿಸುವ ಉದ್ದೇಶದಿಂದ ಜಪಮಾಲೆಗೆ ಆಕರ್ಷಕ ರೂಪ ನೀಡುವ ಕೆಲಸವನ್ನು ಶಿಪ್ರಾ ಮೂರು ವರ್ಷಗಳಿಂದ ಮಾಡ್ತಿದ್ದಾರೆ. Narottampur ಗ್ರಾಮದ ಮಹಿಳೆಯರು ಈ ಕೆಲಸಕ್ಕೆ ಕೈಹಾಕಿದಾಗ ಶಿಪ್ರಾ ಉದ್ದೇಶ ಸಾರ್ಥಕವಾಯ್ತು. ಮಹಿಳೆಯರಿಗೆ ವ್ಯಾಪಾರ ನೀಡುವುದರ ಜೊತೆಗೆ ಮಹಿಳೆಯರನ್ನು ಸಶಕ್ತ ಹಾಗೂ ಸ್ವಾವಲಂಬಿಗಳನ್ನಾಗಿ ಮಾಡುವುದು ಶಿಪ್ರಾ ಉದ್ದೇಶ. ಈ ಕಥೆಯನ್ನು ಹೀಗೆ ಹೇಳ್ತಾರೆ ಶಿಪ್ರಾ.

``ಆರಂಭದಲ್ಲಿವ ಹೊಸದನ್ನು ಮಾಡುವ ಅಭಿಲಾಷೆ ನನಗಿತ್ತು. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿದ ನಂತರ ಸಮಾಜದ ಕೊನೆ ಸ್ಥರದಲ್ಲಿರುವ ಮಹಿಳೆಯರಿಗಾಗಿ ಕೆಲಸ ಮಾಡಲು ನಾನು ಬಯಸಿದ್ದೆ. ಹಾಗಾಗಿ ನಾನು ಈ ಮಹಿಳೆಯರ ಜೊತೆ ಉದ್ಯೋಗ ಮುಂದುವರೆಸಿದ್ದೇನೆ. ಸದ್ಯ ನನ್ನ ಜೊತೆ ಗ್ರಾಮದ 100ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡ್ತಿದ್ದಾರೆ. ‘’
ಶಿಪ್ರಾ ಹಾಗೂ ಅವರ ಜೊತೆ ಕೆಲಸ ಮಾಡುವ ಮಹಿಳೆಯರಿಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಸಾವಿರ ರೂಪಾಯಿಯಲ್ಲಿ ಆರಂಭವಾದ ಉದ್ಯೋಗ ಈಗ ಲಕ್ಷಾಂತರ ರೂಪಾಯಿ ಮುಟ್ಟಿದೆ. ಶಿಪ್ರಾ ಸಣ್ಣ ಬಂಡವಾಳದೊಂದಿಗೆ ಸಣ್ಣ ಊರಿನಲ್ಲಿ ಕೆಲಸ ಶುರುಮಾಡಿದ್ದರು. ಆದ್ರೀಗ ನೋಯ್ಡಾ,ದೆಹಲಿ,ಲಕ್ನೋದಂತ ದೊಡ್ಡ ನಗರಗಳಿಗೂ ಇವರ ವ್ಯಾಪಾರ ವ್ಯಾಪಿಸಿದೆ. ಈ ನಗರಗಳಲ್ಲಿ ಶಿಪ್ರಾ ಶೋರೂಂ ತೆರೆದಿದ್ದಾರೆ. ವಾರಣಾಸಿಯಲ್ಲಿ ಜಪಮಾಲೆಗಳು ಸಿದ್ಧವಾದ ತಕ್ಷಣ ಮಾರಾಟವಾಗ್ತಾ ಇವೆ. ಇಷ್ಟೇ ಅಲ್ಲ ವಿದೇಶಗಳಲ್ಲೂ ಇವರು ಸಿದ್ಧಪಡಿಸಿದ ಜಪಮಾಲೆಗಳಿಗೆ ಬೇಡಿಕೆ ಇದೆ. ಇದನ್ನು ನೋಡಿದ ಶಿಪ್ರಾ malaindia.com ಹೆಸರಿನ ವೆಬ್ಸೈಟ್ ಶುರುಮಾಡಿದ್ದಾರೆ.. ಅಲ್ಲದೆ ಕೆಲ ಆನ್ಲೈನ್ ಮಾರ್ಕೆಟಿಂಗ್ ಕಂಪನಿಗಳ ಜೊತೆ ಶಿಪ್ರಾ ಒಪ್ಪೊಂದ ಮಾಡಿಕೊಂಡಿದ್ದಾರೆ. ಕಾಶಿಯ ಈ ಗುರುತನ್ನು ದೇಶ ವಿದೇಶಗಳಿಗೆ ತಲುಪಿಸುತ್ತಿದ್ದಾರೆ ಶಿಪ್ರಾ. ಶಿಪ್ರಾ ಪ್ರಕಾರ ಅವರಲ್ಲಿ ಎಲ್ಲ ಬಗೆಯ ಜಪಮಾಲೆಗಳು ಸಿಗುತ್ತವೆಯಂತೆ. ಕಪ್ಪು ರುದ್ರಾಕ್ಷಿ,ಶ್ರೀಗಂಧದ ಮಾಲೆ,ತುಳಸಿ ಮಾಲೆ,ರತ್ನಗಳ ಮಾಲೆಯನ್ನು ಸಿದ್ಧಪಡಿಸ್ತಾರೆ ಮಹಿಳೆಯರು.
ಶಿಪ್ರಾ ಹೇಳ್ತಾರೆ ``ಮಹಿಳೆಯರಿಗೆ ಹೆಚ್ಚಿನ ಲಾಭ ಸಿಗಬೇಕೆನ್ನುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಉದ್ಯೋಗವನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮದಿಂದ ನನಗೆ ಹೊಸ ಶಕ್ತಿ ಸಿಕ್ಕಿದೆ. ಜೊತೆಗೆ ಕೆಲಸ ಮಾಡಲು ಹೊಸ ವಿಧಾನ ಸಿಕ್ಕಿದೆ.ನನ್ನ ಉದ್ಯೋಗದಲ್ಲಿ ಸಂಪ್ರದಾಯದ ಜೊತೆಗೆ ಆಧುನಿಕತೆಯನ್ನು ಸೇರಿಸಲು ಬಯಸುತ್ತೇನೆ.’’
ವಾರಣಾಸಿಯ ಘಾಜಿಪುರ ಜಿಲ್ಲೆಯ ಮೂಲ ನಿವಾಸಿ ಶಿಪ್ರಾ ಅವರಿಗೆ ಗ್ರಾಮದ ಮಹಿಳೆಯರನ್ನು ಒಂದು ಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ದೊಡ್ಡ ನಗರಗಳಲ್ಲಿ ಕೆಲಸ ಮಾಡಿದ ಶಿಪ್ರಾಗೆ ತಮ್ಮೂರು ಕರೆದಿತ್ತು. ಬನಾರಸ್ ನ Narottampur ಗ್ರಾಮವನ್ನು ಶಿಪ್ರಾ ತಮ್ಮ ಕರ್ಮಭೂಮಿ ಮಾಡಿಕೊಂಡರು. Narottampur ಗ್ರಾಮದ ಮಹಿಳೆಯರು ಹೂಗಳನ್ನು ಬೆಳೆಸುತ್ತಿದ್ದರು. ಬಿಡುವಿನ ವೇಳೆ ಮಣಿಗಳ ಮಾಲೆ ಮಾಡ್ತಾ ಇದ್ದರು. ಆದರೆ ಆಧುನಿಕ ಜಗತ್ತಿನಲ್ಲಿ ಈ ಮಹಿಳೆಯ ಮಣಿ ಸರ ಗ್ರಾಹಕರನ್ನು ಆಕರ್ಷಿಸುತ್ತಿರಲಿಲ್ಲ.ಅವರ ಪರಿಶ್ರಮಕ್ಕೆ ತಕ್ಕ ಫಲ ಕೂಡ ಸಿಗ್ತಾ ಇರಲಿಲ್ಲ. ಶಿಪ್ರಾ ಮಹಿಳೆಯರ ಕೌಶಲ್ಯಕ್ಕೆ ಮತ್ತಷ್ಟು ಜೀವ ತುಂಬಿದ್ರು.ಅವರಿಗೆ ಉತ್ತಮ ತರಬೇತಿ ನೀಡಿ,ಉತ್ಸಾಹ ಹೆಚ್ಚಿಸಿದ್ರು. ನಂತರ ಮಹಿಳೆಯರು ತಮ್ಮ ಕೌಶಲ್ಯ ಪ್ರದರ್ಶನ ಶುರುಮಾಡಿದ್ರು. ಅದರ ಪರಿಣಾಮ ಈಗ ಎಲ್ಲರ ಮುಂದಿದೆ.

ಆರಂಭದ ದಿನಗಳಲ್ಲಿ ಶಿಪ್ರಾ ಜೊತೆ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಕೆಲಸ ಮಾಡ್ತಾ ಇದ್ದರು. ಆದ್ರೆ ದಿನ ಕಳೆದಂತೆ ಉದ್ಯೋಗ ಬೆಳೆದಂತೆ,ಬೇರೆ ಬೇರೆ ಗ್ರಾಮದ ಮಹಿಳೆಯರೂ ಇದರಲ್ಲಿ ಬೆರೆತರು. ಈ ಮಹಿಳೆಯರ ಜೊತೆ ಸೇರಿ ಶಿಪ್ರಾ ಪ್ರತಿ ತಿಂಗಳು ಎಂಟರಿಂದ ಹತ್ತು ಲಕ್ಷ ವಹಿವಾಟು ನಡೆಸುತ್ತಾರೆ. ವಾರಣಾಸಿಯೊಂದೆ ಅಲ್ಲ ದೇಶದ ಇನ್ನೂ ಅನೇಕ ನಗರಗಳಲ್ಲಿ ಈ ಮಾಲೆಗಳಿಗೆ ಸಾಕಷ್ಟು ಬೇಡಿಕೆ ಇದೆ. ವಿಶೇಷವಾಗಿ ವಿದೇಶದಿಂದ ಬರುವ ಪ್ರವಾಸಿಗರು ಇದಕ್ಕೆ ಸಾಕಷ್ಟು ಆಕರ್ಷಿತರಾಗ್ತಾರೆ. ವಾರಣಾಸಿ ಧಾರ್ಮಿಕ ಕೇಂದ್ರವಾಗಿದ್ದು,ಅಲ್ಲಿಗೆ ಬರುವ ಭಕ್ತರು ಮುಖ್ಯವಾಗಿ ಜಪಮಾಲೆ ಕೊಂಡೊಯ್ಯುತ್ತಾರೆ. ಶಿಪ್ರಾ ಭಕ್ತರ ಈ ಭಾವನೆಯನ್ನು ಅರಿತು, ಅದನ್ನೇ ವ್ಯಾಪಾರಕ್ಕೆ ಬಳಸಿಕೊಂಡರು.
ಬದಲಾದ ಗ್ರಾಮದ ಸ್ಥಿತಿ ಹಾಗೂ ಮಹಿಳೆಯರ ಜೀವನ
ಈ ಉದ್ಯೋಗದಿಂದಾಗಿ Narottampur ಗ್ರಾಮದಲ್ಲಿ ವಾಸಿಸುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಅದೇ ಗ್ರಾಮದ ಮಹಿಳೆ ಶಹನಾಜ್ ಬೇಗಂ ಹೀಗೆ ಹೇಳ್ತಾರೆ.
``ಮೇಡಂ ಅವರು ನಮಗೆ ಸಿಕ್ಕಾಗಿನಿಂದ ನಮ್ಮ ಜೀವನ ಸುಧಾರಿಸಿದೆ. ಮೊದಲು ಕುಟುಂಬದವರ ಹೊಟ್ಟೆ ಹಾಗೋ ಹೀಗೋ ತುಂಬ್ತಾ ಇತ್ತು. ಆದ್ರೀಗ ಸ್ವಲ್ಪ ಪ್ರಮಾಣದ ಉಳಿತಾಯವೂ ಆಗ್ತಾ ಇದೆ.’’
ಶಿಪ್ರಾ ಅವರ ಈ ಹೆಜ್ಜೆ ಮಹಿಳೆಯರನ್ನು ಕೇವಲ ಪ್ರಬಲರನ್ನಾಗಿ ಮಾಡಲಿಲ್ಲ. ಜೊತೆ ಜೊತೆಗೆ ಸ್ಟಾರ್ಟ್ ಅಪ್ ಇಂಡಿಯಾ ಬಗ್ಗೆ ಪ್ರಧಾನ ಮಂತ್ರಿ ಕಂಡಿದ್ದ ಕನಸನ್ನು ನನಸು ಮಾಡುತ್ತಿದೆ.
ಲೇಖಕರು: ಅಶುತೋಷ್ ಸಿಂಗ್
ಅನುವಾದಕರು: ರೂಪಾ ಹೆಗಡೆ