ದಿನಪತ್ರಿಕೆ ಅಂದ್ರೆ ಆ ದಿನದ ಸುದ್ದಿ ಓದಿ, ನಂತ್ರ ಅದನ್ನು ಮೂಲೆ ಸೇರಿಸೋರೆ ಹೆಚ್ಚು. ಇವತ್ತಿನ ಪೇಪರ್ ನಾಳೆ ವೇಸ್ಟ್ ಪೇಪರ್ ಅನ್ನೋ ಮಾತಿದೆ. ಆದ್ರೆ ಅದೇ ವೇಸ್ಟ್ ಪೇಪರ್‍ನಿಂದ ಜೀವನವನ್ನು ಕಟ್ಟಿಕೊಳ್ಳಬಹುದು ಅಂದ್ರೆ ನೀವು ನಂಬ್ತಿರಾ. ಇಲ್ಲ ಅಂದ್ರೂ ನೀವು ನಂಬಲೇಬೇಕು. ಯಾಕೆಂದ್ರೆ ಅದೆಷ್ಟೂ ಕುಟುಂಬಗಳು ವೇಸ್ಟ್ ಪೇಪರ್ ಎಂದು ಬಿಸಾಡುವ ಬದಲು ಅದ್ರಲ್ಲೇ ಒಂದು ವೃತ್ತಿಯನ್ನು ಕಂಡುಕೊಂಡಿದ್ದಾರೆ. ಅರೇ ಹೇಗಾಪ್ಪ? ಅಂತ ಯೋಚನೆ ಮಾಡ್ತಿದ್ದೀರಾ. ಹೌದು ಅದು ಪೇಪರ್ ಪೆನ್ ಮೂಲಕ ಅದೆಷ್ಟು ಜನ್ರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ನ್ಯೂಸ್ ಪೇಪರ್ ಅನ್ನು ಬಳಸಿ ನಂತ್ರ ಬಿಸಾಡುವವರೇ ಹೆಚ್ಚು. ಆದ್ರೆ ಅದೇ ಪೇಪರ್‍ನಿಂದ ಏನೆಲ್ಲಾ ಮಾಡಬಹುದು ಎಂಬುದನ್ನು ಸಮರ್ಪಣ ಸಂಸ್ಥೆಯ ಶಿವಕುಮಾರ್ ಹೊಸಮನಿ ತೋರಿಸಿಕೊಟ್ಟಿದ್ದಾರೆ. ಅದ್ರಲ್ಲೂ ಪೇಪರ್‍ನಿಂದ ಪೇಪರ್ ಹೊರತಂದಿದ್ದಾರೆ. ಅವು ಪರಿಸರ ಸ್ನೇಹಿ ಎಂಬುದೇ ವಿಶೇಷ.. ಇಂಗ್ಲಿಷ್- ಕನ್ನಡ ನ್ಯೂಸ್ ಪೇಪರ್ ಮತ್ತು ಮ್ಯಾಗಜೀನ್‍ಗಳನ್ನು ಬಳಸಿ ಪೇಪರ್ ಪೆನ್ ತಯಾರಿಸುತ್ತಾರೆ. ರೀಫಿಲ್ ಮಾತ್ರ ಬಳಸಿ ಪೇಪರ್ ಪೆನ್ ಅನ್ನು ಬಳಸಲಾಗುತ್ತದೆ.
ಹಾನಿಕಾರಕ ವಸ್ತುಗಳಿಂದ ಪೆನ್ ತಯಾರಿಸುವ ಬದಲು, ಪೇಪರ್‍ಗಳನ್ನು ಬಳಸಿ ತಯಾರಿಸಿದ್ರೆ ಪರಿಸರಕ್ಕೂ ಹಾನಿಯುಂಟು ಮಾಡುವುದಿಲ್ಲ. ಮತ್ತೆ ಮತ್ತೆ ಅದನ್ನು ಪುನರ್ ಬಳಕೆಯನ್ನು ಮಾಡಬಹುದು ಅಂತಾರೆ ಸಮರ್ಪಣ ಸಂಸ್ಥೆಯ ಶಿವಕುಮಾರ್ ಹೊಸಮನಿ.ಇನ್ನು ನ್ಯೂಸ್ ಪೇಪರ್‍ನಿಂದ ತಯಾರಿಸಿ ಪೆನ್ನುಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡತ್ತಾರೆ. ನ್ಯೂಸ್ ಪೇಪರ್‍ಗಳಿಂದ ಆಕರ್ಷಕವಾಗಿ ಪೆನ್ನುಗಳನ್ನು ಸಿದ್ಧಪಡಿಸುವ ಹೊಸ ಪ್ರಯೋಗವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇನ್ನು ತಮ್ಮ ಅಕ್ಕ ಪಕ್ಕ ಮನೆಯ ನಿವಾಸಿಗಳಿಗೆ ಹಾಗೂ ಶಾಲಾ- ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ದಯವಿಟ್ಟು ನೀವೂ ನಮ್ಮ ಹಳೆಯ ದಿನಪತ್ರಿಕೆಗಳನ್ನು ನೀಡಿ, ಪರಿಸರ ಸಂರಕ್ಷಿಸಿ ಎಂದು ಸಾರುತ್ತಾರೆ. ಇನ್ನು ಇದ್ರಿಂದಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಅನ್ನೋದು ಇವ್ರ ಉದ್ದೇಶ.

ಇನ್ನು ಕಾಗದ ಅತೀ ಸುಲಭವಾಗಿ ಸಿಗುವ ವಸ್ತು. ಆದ್ರೆ ಅದನ್ನು ಉಪಯುಕ್ತವಾಗಿ ಬಳಸಿಕೊಳ್ಳುವವರು ಕಡಿಮೆ ಜನ. ಆದ್ದರಿಂದ ನ್ಯೂಸ್ ಪೇಪರ್ ಬಳಸಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ವಿನ್ಯಾಸವನ್ನು ಹೊರತರಲು ಜನರು ಪ್ರಯೋಗಗಳನ್ನು ಒಡ್ಡುತ್ತಿದ್ದಾರೆ. ವಿಭಿನ್ನತೆ ಬಯಸುವವರಿಗೆ ಇಲ್ಲಿ ಆಯ್ಕೆಗಳಿವೆ. ಇನ್ನು ಕೇವಲ ಪೆನ್ನುಗಳು ಮಾತ್ರವಲ್ಲದೇ ಆಭರಣಗಳು, ಚೆಂದದ ಗೃಹೋಪಯೋಗಿ ವಸ್ತುಗಳು, ಗೃಹಾಲಂಕಾರಕ್ಕೆ, ಆಫೀಸ್‍ನ ಅಂದಕ್ಕೆ ಒಪ್ಪುವ, ಉಡುಗೂರೆ ನೀಡಲು ಪೇಪರ್‍ಗಳನ್ನು ಬಳಸಬಹುದು.
ಇನ್ನು ಈ ಪೇಪರ್ ತಯಾರಿ ಮಾಡುವುದು ತುಂಬಾನೇ ಸುಲಭ. ಪೇಪರ್‍ನಿಂದ ರೀಫಿಲ್‍ಅನ್ನು ಸುತ್ತಿ, ಆಕಾರಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟು ಗಾತ್ರ ಸುತ್ತಿಕೊಳ್ಳಬೇಕು. ನಂತರ ಗಮ್‍ನಿಂದ ಅಂಟಿಸಿದ್ರೆ ಆಯ್ತು. ಪೆನ್ನಿನ ಕ್ಯಾಪ್ ಕೂಡ ಅದ್ರಲ್ಲೇ ಮಾಡಬಹುದು. ಪೇಪರ್ ಸುತ್ತಿದ ನಂತರ ತುದಿಯಲ್ಲಿ ರೀಫಿಲ್ ಮುಳ್ಳು ಬರುವಂತೆ ಎಳೆದ್ರೆ ಆಯ್ತು. ಅಂದ ಚೆಂದದ ಪೆನ್ನು ತಯಾರಿ ಆಗುತ್ತೆ. ಇದನ್ನು ಮಾಡಲು ಕೇವಲ ನಿಮಿಷಗಳು ಮಾತ್ರ ಸಾಕು. ಇದಕ್ಕಾಗಿ ಸಮರ್ಪಣ ಸಂಸ್ಥೆ ಚಿಕ್ಕ ಮರದ ಯಂತ್ರವನ್ನು ಮಾಡಿಕೊಂಡಿದೆ. ಅದ್ರ ಸಹಾಯದಿಂದ ಪೇಪರ್ ಅನ್ನು ಕ್ಷಣ ಮಾತ್ರದಲ್ಲಿ ತಯಾರಿ ಮಾಡತ್ತಾರೆ.
ಇನ್ನು ಈ ಪೇಪರ್ ತಯಾರಿಕೆಗೆ ಬಿಡುವಿನ ಸಮಯದಲ್ಲಿ ಮಕ್ಕಳು, ಮನೆಯಲ್ಲಿರುವ ಗೃಹಿಣಿಯರು ಕೂಡ ಉದ್ಯಮವಾಗಿ ಮಾಡಿಕೊಂಡಿದ್ದಾರೆ. ಹೆಚ್ಚು ಖರ್ಚುಯಿಲ್ಲದೇ ಸುಲಭವಾಗಿ ಹಣವನ್ನು ಸಂಪಾದನೆ ಮಾಡಬಹುದು. ಮನೆಯಲ್ಲಿ ಕುಳಿತುಕೊಂಡು ಪೇಪರ್ ತಯಾರಿಯನ್ನು ಮಾಡಿ ಹಣವನ್ನು ಗಳಿಸಬಹುದು.

ಕಾಲೇಜು ವಿದ್ಯಾರ್ಥಿಗಳು ಸಣ್ಣ ಉದ್ಯಮಿಗಳು
ಹೌದು ಶಾಲಾ-ಕಾಲೇಜು ಮಕ್ಕಳು ಕೂಡ ಪೇಪರ್ ಪೆನ್ನು ಅನ್ನು ತಯಾರಿಸುತ್ತಾರೆ. ಕಾಲೇಜು ಮುಗಿದ ನಂತರ ಪೇಪರ್ ಪೆನ್ನ್ ತಯಾರು ಮಾಡಲು ಬರುತ್ತಿನಿ. ಇದ್ರಿಂದಾಗಿ ಕೆಲವೊಮ್ಮೆ ನಮ್ಮ ಖರ್ಚಿಗೆ ನಾವೇ ಸಂಪಾದನೆ ಮಾಡಿಕೊಳ್ಳುತ್ತಿವೆ. ಅಷ್ಟೇಅಲ್ಲ ನಾವೇ ತಯಾರಿಸಿದ ಪೆನ್ನು ಬಳಕೆ ಕೂಡ ಮಾಡತ್ತಿವಿ. ಇದರಿಂದ ನಾವೇ ತಯಾರಿಸಿದ ಪೆನ್ನು ಎನ್ನುವ ಖುಷಿನೂ ಇರುತ್ತೆ. ಕುಳಿತ ಜಾಗದಲ್ಲೇ ಸಣ್ಣ ಉದ್ಯಮವಾಗಿ ಮಾಡುತ್ತಿರೋ ಹೆಮ್ಮೆ ಎನ್ನಿಸುತ್ತೆ, ಕಾಲೇಜುನಲ್ಲಿನಲ್ಲೂ ಎಲ್ಲರು ಈ ಪೆನ್ನು ನೋಡಿ ಹೀಗೂ ಮಾಡಬಹುದು ಅಂತ ಕೇಳತ್ತಾರೆ ಅಂತಾರೆ ಕಾಲೇಜು ವಿದ್ಯಾರ್ಥಿ ಪ್ರಶಾಂತ್.
ಇನ್ನು ನೋಡಲು ಕಲರ್‍ಫುಲ್ ಆಗಿರೋ ಪೇಪರ್ ಪೆನ್ನುಗಳನ್ನು ನೋಡಿದ ಪ್ರತಿಯೊಬ್ಬರು ಒಮ್ಮೆ ಆಶ್ಚರ್ಯ ಪಡುತ್ತಾರೆ. ಅದ್ರಲ್ಲೂ ಹೆಚ್ಚು ಬಣ್ಣಗಳನ್ನು, ವೈವಿಧ್ಯತೆಯನ್ನು ಹುಡುಕುವ ಕಾಲೇಜು ಹುಡುಗ-ಹುಡುಗಿಯರು ಪೇಪರ್ ಪೆನ್ನಿಗೆ ಮರುಳಾಗಿದ್ದಾರೆ. ಹೆಚ್ಚು ಈ ಪೇಪರ್ ಪೆನ್ನ್ ಅನ್ನು ಖರೀದಿಸುತ್ತಾರೆ. ಜೊತೆಗೆ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿಯೂ ನೀಡುತ್ತಿದ್ದಾರೆ. ಇದು ಈಗ ಎಲ್ಲ ಕಡೆಯಲ್ಲೂ ಬೇಡಿಕೆ ಬಂದಿದೆ ಅಂತಾರೆ ಗೃಹಿಣಿ ನವ್ಯ.
ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಸುಲಭವಾಗಿ ಪೇಪರ್ ಪೆನ್ನುಗಳನ್ನು ತಯಾರಿಸಿ, ಹಣವನ್ನ ಸಂಪಾದಿಸುವ ಅವಕಾಶವಿದೆ. ಇನ್ನು ನ್ಯೂಸ್ ಪೇಪರ್‍ಗಳಿಂದ ಪೆನ್ನುಗಳನ್ನು ತಯಾರಿಸುವುದನ್ನು ಸಮರ್ಪಣ ಸಂಸ್ಥೆಯೂ ಉಚಿತವಾಗಿ ಕಲಿಸಿಕೊಡುತ್ತೆ. ಸ್ವಯಂ ಉದ್ಯೋಗ ಸ್ವಾಭಿಮಾನದ ಪ್ರತೀಕದ ಜೊತೆ ಪರಿಸರ ಸ್ನೇಹಿ ಪೆನ್ನುಗಳನ್ನು ಬಳಸಬಹುದು. ಒಟ್ಟಾರೆ ಮನಸ್ಸುವೊಂದು ಇದ್ದಾರೆ ಏನ್ನಾದ್ರೂ ಮಾಡಬಹುದು. ಹೊಸ ಉದ್ಯಮವನ್ನೇ ಪ್ರಾರಂಭ ಮಾಡಬಹುದು ಎಂಬುದಕ್ಕೆ ಇದೇ ಸಾಕ್ಷಿ.