ಜನರಲ್ಲಿ ಓದುವ ಆಸಕ್ತಿಯನ್ನು ಬೆಳೆಸುತ್ತಿರುವ ಲೈಬ್ರರಿ ಕಮ್ ಸಲೂನ್
ತಮಿಳುನಾಡಿನ ತೂತುಕುಡಿಯಲ್ಲಿರುವ ಮರಿಯಪ್ಪನವರು ಜನರಲ್ಲಿ ಓದುವ ಆಸಕ್ತಿ ಮೂಡಿಸಲು ತಮ್ಮ ಸಲೂನ್ ಅಂಗಡಿಯಲ್ಲಿ 1500 ಪುಸ್ತಕಗಳನ್ನು ಸಂಗ್ರಹಿಸಿದ್ದು, ಜನರ ಕಾಯುವಿಕೆಯ ಸಮಯ ವ್ಯರ್ಥವಾಗದಂತೆ ಮಾಡಿದ್ದಾರೆ.
ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸ್ನೇಹಿತರಿದ್ದಂತೆ. ಅವು ಸದಾ ಕಾಲ ನಮ್ಮನ್ನು ಕಾಪಾಡುತ್ತವೆ. ಅಲ್ಲದೆ ಪುಸ್ತಕಗಳಿಗಿಂತ ನಂಬಿಗಸ್ಥ ಗೆಳೆಯರಿಲ್ಲ. ಅದರಲ್ಲಿಯೂ ಈಗಿನ ಜನತೆ ಮೊಬೈಲು, ಇಂಟರ್ನೆಟ್ ಒಂದಿದ್ರೆ ಸಾಕು ಎಲ್ಲಾದ್ರೂ ಬದುಕಬಹುದು ಎನ್ನುವಾಗ ಸಲೂನ್ ಶಾಪ್ ನಲ್ಲಿಯೂ ಕೂಡ ಒಂದತ್ತು ನಿಮಿಷ ಸಮಯ ಖಾಲಿ ಕುಳಿತುಕೊಳ್ಳುವುದು ಅಂದ್ರೆ ಆಗದು. ಅಲ್ಲಿಯೂ ಮೊಬೈಲ್ ಹಿಡಿದುಕೊಂಡು ಕೂರುತ್ತಾರೆ. ಇನ್ನೂ ಪುಸ್ತಕ ಓದುವುದಂತೂ ದೂರವೇ ಉಳಿಯಿತು.
ಜನರಲ್ಲಿ ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಅದಕ್ಕಾಗಿ ಅನೇಕರು ಬೇರೆ ಬೇರೆ ವಿಧಾನದ ಮೂಲಕ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರು ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಅಂಕೇಗೌಡರು ಪುಸ್ತಕಗಳನ್ನು ಸಂಗ್ರಹಿಸಿ ಓದುವವರಿಗೆ ದಾರಿದೀಪವಾಗಿದ್ದಾರೆ. ಪೂನಾದಲ್ಲಿ ಕಾಲೇಜಿನ ತಂಡವೊಂದು ಎಲ್ಲರಿಗೂ ಪುಸ್ತಕ ಲಭ್ಯವಾಗಲಿ ಎಂದು ಓಪನ್ ಬುಕ್ ಮೂಮೆಂಟ್ ಅನ್ನು ಸ್ಥಾಪಿಸಿದೆ.
ಹಾಗೇಯೆ ತಮಿಳುನಾಡು ರಾಜ್ಯದ ತೂತುಕೂಡಿ ಜಿಲ್ಲೆಯಲ್ಲಿ ಸಲೂನ್ ಅಂಗಡಿಯನ್ನು ಹೊಂದಿರುವ ಮರಿಯಪ್ಪ ಎಂಬುವವರು ಜನರಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂದು ತಮ್ಮ ಅಂಗಡಿಯಲ್ಲಿಯೆ ಗ್ರಂಥಾಲಯವೊಂದನ್ನು ಸ್ಥಾಪಿಸಿದ್ದಾರೆ. ಇಲ್ಲಿ 1500ಕ್ಕೂ ಹೆಚ್ಚು ಪುಸ್ತಕಗಳಿವೆ. ಸರದಿ ಕಾಯುವವರಿಗೆ ಸಮಯ ವ್ಯರ್ಥವಾಗದಂತಿರಲು ಓದುವವರಿಗೆ ಪುಸ್ತಕಗಳಿವೆ. ಪುಸ್ತಕಪ್ರಿಯರಿಗಂತೂ ಈ ಅಂಗಡಿ ನೆಚ್ಚಿನ ತಾಣವೇ ಸೈ.
ಸಲೂನ್ ಅಂಗಡಿಯಲ್ಲಿ ಟೈಮ್ ಪಾಸ್ ಮಾಡಲೆಂದೆ ಟಿವಿ ಇಡುವುದನ್ನು ನಾವು ನೋಡಿದ್ದೇವೆ. ಮರಿಯಪ್ಪರವರು ಪುಸ್ತಕಗಳನ್ನು ಇಡುವ ಮೂಲಕ ಭಿನ್ನ ದಾರಿಯನ್ನು ತೋರಿದ್ದಾರೆ.
ಈ ಸಲೂನ್ ಅಂಗಡಿಯಲ್ಲಿ 1500ಕ್ಕೂ ಹೆಚ್ಚು ಪುಸ್ತಕಗಳ ಸಣ್ಣ ಗ್ರಂಥಾಲಯವೇ ಇದೆ. ಜನರು ತಮ್ಮ ಸರದಿಗಾಗಿ ಕಾಯುವಾಗ ಸಮಯ ಕಳೆಯಲೆಂದು ಪುಸ್ತಕಗಳನ್ನು ಓದುತ್ತಾರೆ. ಕಾಯುವಿಕೆಯ ಸಮಯವನ್ನು ಸಾರ್ಥಕವಾಗುವಂತೆ ಮಾಡಿದ್ದಾರೆ. ವರದಿ ಹರಿಭೂಮಿ.
ಮರಿಯಪ್ಪರವರು ಪುಸ್ತಕಗಳು ಮಾತ್ರವಲ್ಲದೆ, ನಿಯತಕಾಲಿಕೆಗಳು ಮತ್ತು ಪತ್ರಿಕೆಗಳನ್ನು ತರಿಸುತ್ತಾರೆ. ಅಷ್ಟೇ ಅಲ್ಲದೆ ಜನರು ಓದಲೆಂದು ತಮ್ಮ ಅಂಗಡಿಯಲ್ಲಿ ಸೆಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸಿದ್ದಾರೆ, ವರದಿ ಮೈ ನೇಷನ್.
ಇಂದು ಜನರಲ್ಲಿ ಓದುವ ಹವ್ಯಾಸ ಮರೆಯಾಗುತ್ತಿದ್ದು, ಎಲ್ಲರೂ ಮೊಬೈಲ್, ಇಂಟರ್ನೆಟ್ ಮಾಯೆಗೆ ಸಿಲುಕಿಕೊಂಡಿರುವ ಈ ಹೊತ್ತಿನಲ್ಲಿ ಮರಿಯಪ್ಪನವರ ಈ ಕಾರ್ಯ ಅನೇಕರಿಗೆ ಸ್ಪೂರ್ತಿಯಾಗುವಂತಹದು. ಸಲೂನ್- ಕಮ್-ಲೈಬ್ರರಿ ಪುಸ್ತಕಪ್ರಿಯರಿಗೆ ಪ್ರಿಯವಾದ ತಾಣವಾಗಿದೆ ಎಂಬುದಂತೂ ಸುಳ್ಳಲ್ಲ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.