ಮಾಸ್ಕ್ ಹೊಲಿದು ಉಚಿತವಾಗಿ ಹಂಚುವ ದೆಹಲಿಯ ತಾಯಿ-ಮಗ
ಸುರಕ್ಷತಾ ಸಾಧನಗಳನ್ನು ಖರೀದಿಸಲು ಸೌಲಭ್ಯವಂಚಿತರು ಪಡುವ ಕಷ್ಟವನ್ನು ನೋಡಿ ದೆಹಲಿಯ ಸೌರವ್ ದಾಸ್ ಮತ್ತು ಅವರ ತಾಯಿ ಲಕ್ಷ್ಮೀ ಸೇರಿ ಮಾಸ್ಕ್ ಹೊಲಿದು ಬಡವರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 14 ಲಕ್ಷದ ಗಡಿ ದಾಟಿದೆ. ಈ ಸಂದರ್ಭದಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಆದರೆ ಹಲವರಿಗೆ ಈ ಕನಿಷ್ಟ ಸುರಕ್ಷತೆಯನ್ನು ಪಾಲಿಸುವಂತಹ ಸೌಲಭ್ಯವಿರುವುದಿಲ್ಲ.
ಈ ಸಮಸ್ಯೆಗೆ ತಮ್ಮದೆ ರೀತಿಯಲ್ಲಿ ಪರಿಹಾರ ನೀಡಲು ಯೋಚಿಸಿದ ದೆಹಲಿಯ ತಾಯಿ ಮಗನ ಜೋಡಿಯೊಂದು, ಮಾಸ್ಕ್ ಹೊಲಿದು ನಗರದ ಬಡವರಿಗೆ ಉಚಿತವಾಗಿ ವಿತರಿಸುವ ಕಾರ್ಯವನ್ನು ಪ್ರಾರಂಭಿಸಿದರು.
24 ರ ಛಾಯಾಗ್ರಾಹಕ ಸೌರವ್ ದಾಸ್ ಮತ್ತು ಅವರ ತಾಯಿ ಲಕ್ಷ್ಮೀ ಸೇರಿ, ಅವರ ‘ಪಿಕ್ ಒನ್, ಸ್ಟೇ ಸೇಫ್ʼ ಉಪಕ್ರಮದ ಮೂಲಕ 2 ತಿಂಗಳ ಸಮಯದಲ್ಲಿ 2,200 ಕ್ಕೂ ಅಧಿಕ ಮಾಸ್ಕ್‌ಗಳನ್ನು ವಿತರಿಸಿದ್ದಾರೆ.
ಲಾಕ್‌ಡೌನ್ ಶುರುವಾದ ಸಮಯದಲ್ಲಿ ತಮ್ಮ ಪರಿವಾರದ ಸುರಕ್ಷತೆಯ ದೃಷ್ಠಿಯಿಂದ ಸೌರವ್ ತಮಗೆ ಮತ್ತು ತಾಯಿಗಾಗಿ 300 ರೂ. ಖರ್ಚು ಮಾಡಿ ಎರಡು ಎನ್-95 ಮಾಸ್ಕ್ ಕೊಂಡಿದ್ದರು, ಆದರೆ ಅದು ಅವರ ತಾಯಿಗೆ ಧರಿಸಲು ಅಷ್ಟೊಂದು ಸರಿಹೊಂದಲಿಲ್ಲ.
“ಆ ಮುಖಗವಸನ್ನು ತೊಳೆಯಲೂ ಆಗದು, ಮರುಬಳಕೆ ಮಾಡಲು ಆಗದು, ಆದರೂ ಅದರ ಬೆಲೆ ಒಂದಕ್ಕೆ 300 ರೂ,” ಎನ್ನುತ್ತಾರೆ ಸೌರವ್ ಅವರ ತಾಯಿ ಲಕ್ಷ್ಮೀ.
“ನನ್ನೊಬ್ಬ ಚಿಕ್ಕಪ್ಪ ಕೃಷಿ ಮಾಡುತ್ತಾರೆ. ಅವರು ಕೆಲಸ ಮಾಡುವಲ್ಲಿ ಧೂಳಿರುತ್ತದೆ. ನನ್ನ ತಾಯಿ ಚಿಕ್ಕಪ್ಪನಿಗೆ, ಅವರ ಕೆಲಸಗಾರರಿಗೆ ಮತ್ತು ನೆರೆಹೊರೆಯವರಿಗಾಗಿ ಮಾಸ್ಕ್ ಹೊಲೆಯಬೇಕಿತ್ತು. ಆದರೆ ಕೋವಿಡ್-19 ನಿಂದ ನಾವು ಯಾವಾಗ ಅವರನ್ನು ಭೇಟಿಯಾಗಿ ಮಾಸ್ಕ್‌ಗಳನ್ನು ನೀಡುತ್ತೇವೆ ಎಂಬುದು ತಿಳಿದಿಲ್ಲ. ಹಾಗಾಗಿ ನನ್ನ ತಾಯಿ ಮಾಸ್ಕ್ ಕೊಂಡು ಕೊಳ್ಳುವ ಸೌಲಭ್ಯವಿಲ್ಲದವರಿಗೆ ಮಾಸ್ಕ್ ಹೊಲೆದು ಉಚಿತವಾಗಿ ವಿತರಿಸುವ ನಿರ್ಧಾರ ಮಾಡಿದರು,” ಎಂದರು ಸೌರವ್.
ಈ ಉಪಕ್ರಮದೊಂದಿಗೆ ಸೌಲಭ್ಯವಂಚಿತರಿಗೂ ವೈಯಕ್ತಿಕ ಸುರಕ್ಷತಾ ಸಾಧನಗಳು ಸಿಗುವಂತಾಗಬೇಕು ಎಂಬುದು ಸೌರವ್ ಅವರ ಆಶಯ. ಸೌರವ್ ವಿನ್ಯಾಸಗೊಳಿಸಿರುವ ಮಾಸ್ಕ್‌ಗಳ ಪ್ಯಾಕೆಜಿಂಗ್ ಸಂಪರ್ಕರಹಿತವಾಗಿದೆ.
ತಾಯಿ ಲಕ್ಷ್ಮೀ ಪ್ರತಿದಿನ 25-40 ಮಾಸ್ಕ್‌ಗಳನ್ನು ಹೊಲೆಯುತ್ತಾರೆ. ಮರುಬಳಕೆ ಮಾಡಬಹುದಾದ, ಮನೆಯಲ್ಲೆ ತಯಾರಾಗಿರುವ ಈ ಮಾಸ್ಕ್‌ಗಳನ್ನು ದೆಹಲಿಯ ಚಿತ್ತರಂಜನ್ ಪಾರ್ಕ್ ಏರಿಯಾದ ವಿವಿಧ ಸ್ಥಳಗಳಲ್ಲಿ 5 ವಿತರಣಾ ಪೆಟ್ಟಿಗೆಯಲ್ಲಿ ಇಡಲಾಗುತ್ತದೆ.
5 ಪೆಟ್ಟಿಗೆಗಳಲ್ಲಿ ನಾಲ್ಕನ್ನು ಮಾರುಕಟ್ಟೆ ಪ್ರದೇಶದಲ್ಲಿ ಇಟ್ಟರೆ ಇನ್ನುಳಿದ ಒಂದನ್ನು ಇತ್ತೀಚೆಗೆ ದಕ್ಷಿಣ ದೆಹಲಿಯ ತುಘ್ಲಕಾಬಾದ್‌ನ ಅಗ್ನಿ ದುರಂತದಲ್ಲಿ ಅಗಘಾತ ಸಂಭವಿಸಿದ ಮನೆಗಳಿಗೆ ಕಳುಹಿಸಲಾಗುತ್ತದೆ.