Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಮೈ ಲ್ಯಾಂಗ್ ಬುಕ್ಸ್: ಕನ್ನಡಕ್ಕೂ ಬರಲಿದೆ ಡಿಜಿಟಲ್ ಬುಕ್

ಮೈ ಲ್ಯಾಂಗ್ ಬುಕ್ಸ್ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ‌‌ ಕನ್ನಡದಲ್ಲಿ ಇ-ಬುಕ್ ಹಾಗೂ ಆಡಿಯೊ ಬುಕ್‌ಗಳನ್ನು ತಲುಪಿಸುವಂತಹ ವಿನೂತನ ಪ್ರಯತ್ನ ಮಾಡುತ್ತಿದೆ.

ಮೈ ಲ್ಯಾಂಗ್ ಬುಕ್ಸ್: ಕನ್ನಡಕ್ಕೂ ಬರಲಿದೆ ಡಿಜಿಟಲ್ ಬುಕ್

Monday February 03, 2020 , 3 min Read

ಇಂದು ಯುವಜನತೆಯಲ್ಲಿ ಸಾಹಿತ್ಯದೆಡೆಗೆ ಸೆಳೆತವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಇಂಟರ್ನೆಟ್, ಮೊಬೈಲ್ ಕೂಡ ಪರೋಕ್ಷ ಕಾರಣಗಳಾಗುತ್ತಿವೆ‌. ಯುವಜನತೆಯಲ್ಲಿ ಸಾಹಿತ್ಯದ ಕುರಿತಾಗಿ, ಪುಸ್ತಕದ ಕುರಿತಾಗಿ ಆಸಕ್ತಿಯನ್ನು ಮೂಡಿಸಬೇಕೆಂದು ಹಲವಾರು ಜನರು ಒಂದಿಲ್ಲೊಂದು ಪ್ರಯತ್ನದಲ್ಲಿ ತೊಡಗಿದ್ದಾರೆ‌.


ಇಂದು ಒತ್ತಡದ ಬದುಕಿನ ನಡುವೆ ಪುಸ್ತಕ ಓದುವುದು ಅಪರೂಪವಾಗುತ್ತಿದೆ. ಹೋಗುವ ಎಲ್ಲ ಕಡೆಯೂ ಪುಸ್ತಕವನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಸಿಗುವ ಕಡಿಮೆ ಅವಧಿಯಲ್ಲಿಯೇ ನೂರೆಂಟು ಜವಾಬ್ದಾರಿಗಳು. ಹೀಗಿರುವಾಗ ಪುಸ್ತಕವೊಂದನ್ನು ಸುಲಭವಾಗಿ ಆಡಿಯೋ ರೂಪದಲ್ಲಿ ಕೇಳುವ ಹಾಗಿದ್ದರೆ ಅಥವಾ ಮೊಬೈಲ್, ಟ್ಯಾಬ್‌ನಲ್ಲಿ ಓದುವ ಹಾಗಾದರೆ ಎಷ್ಟು ಚೆನ್ನ ಅಲ್ಲವೇ. ಈ ಪರಿಕಲ್ಪನೆ ಇಂಗ್ಲೀಷ್ ಭಾಷೆಯಲ್ಲಿ ಜನಪ್ರಿಯವಾಗಿದೆ‌. ಕನ್ನಡದಲ್ಲಿಯೂ ಸದ್ಯದಲ್ಲೇ ಇಂತಹ ವಿನೂತನ ಯೋಜನೆಯೊಂದು ಪ್ರಾರಂಭವಾಗುವುದರಲ್ಲಿದೆ. ಅದೇ ಮೈ ಲ್ಯಾಂಗ್ ಬುಕ್ಸ್.


ಮೈಲ್ಯಾಂಗ್ ಬುಕ್ಸ್ ಡಿಜಿಟಲ್‌ನ ಫೇಸ್‌ಬುಕ್‌ ಮುಖಪುಟ

ಮೈಲ್ಯಾಂಗ್ ಬುಕ್ಸ್ ಡಿಜಿಟಲ್‌ ಈ ಮೂಲಕ ಕನ್ನಡ ಓದುಗರಿಗೆ ಸುಲಭವಾಗಿ ಇ-ಬುಕ್ ಹಾಗೂ ಆಡಿಯೋ ಬುಕ್‌ಗಳನ್ನು ತಲುಪಿಸುವಂತಹ ಕ್ರಿಯೆಯಲ್ಲಿ ತೊಡಗಿಕೊಂಡಿದೆ.


ಇದರ ಕುರಿತಾಗಿ ಮಾತನಾಡಿದ ಮೈ ಲ್ಯಾಂಗ್ ಬುಕ್ಸ್‌ನ ಮಾರ್ಕೆಟಿಂಗ್ ಜವಾಬ್ದಾರಿಯನ್ನು ಹೊತ್ತಿರುವ ವಸಂತ್ ಶೆಟ್ಟಿಯವರು, ಪ್ರಕಾಶನ ಹಾಗೂ ಇಂದಿನ ಕಾಲಕ್ಕೆ ತಕ್ಕಂತೆ ಬೇಕಿರುವ ಡಿಜಿಟಲ್ ಬದಲಾವಣೆ ಮುಂತಾದ ವಿಷಯದ ಕುರಿತಾಗಿ ವಿವರಿಸಿದರು.


ಕನ್ನಡ ಪ್ರಕಾಶನ ಎಡವುತ್ತಿರುವುದೆಲ್ಲಿ?

ಕನ್ನಡ ಭಾಷೆಯಲ್ಲಿ ಕಳೆದ 100 ವರ್ಷಕ್ಕೂ ಹೆಚ್ಚಿನ ಸಮಯದಿಂದ ಪ್ರಕಾಶನ ಎಂಬುದು ಚಾಲ್ತಿಯಲ್ಲಿದೆ. ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ. ಆದರೆ ಕಾಲಕ್ಕೆ ತಕ್ಕನಾಗಿ ಹಲವಾರು ಬದಲಾವಣೆಗಳುಂಟಾದರೂ ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳು ಇನ್ನೂ ಹಿಂದೆ ಉಳಿದಿದೆ.


ಪ್ರಕಾಶಕರಲ್ಲಿ ಇದ್ದಂತಹ ತಂತ್ರಜ್ಞಾನದ ಭಯ, ಆ ಕಾಲಕ್ಕೆ ಇನ್ನೂ ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಒಗ್ಗಿಕೊಂಡಿರಲಿಲ್ಲ. ಅಂದ್ರೆ ಐದಾರು ವರ್ಷದ ಹಿಂದೆಯೆ ಈಗ ಇದ್ದಷ್ಟು ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಫೋನ್, ಇಂಟರ್ನೆಟ್ ಬಳಕೆ ಅಷ್ಟಾಗಿ ಲಭ್ಯವಿರಲಿಲ್ಲ.


ಹಾಗೆಯೇ ಬರಹ, ಬರಹಗಾರರ ಪರಂಪರೆ ಇದ್ದರೂ ಇಂದಿನ ಸ್ಥಿತಿಗತಿಗೆ ತಕ್ಕಂತೆ ಸಾಹಿತ್ಯ ಹಾಗೂ ಪ್ರಕಾಶನದ ಲೋಕ ಬದಲಾವಣೆ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕನ್ನಡ ಪುಸ್ತಕಗಳನ್ನು ಕೊಳ್ಳಲು ಅಂಗಡಿಗಳು ಕಡಿಮೆಯಿದ್ದಾವೆ, ಎಲ್ಲ ಕಡೆಯಲ್ಲಿಯೂ ಸರಿಯಾದ ಸಮಯಕ್ಕೆ ಪುಸ್ತಕ ಲಭ್ಯವಾಗುವುದಿಲ್ಲ. ವಿತರಣೆಯ ಕೊರತೆಯಿದೆ.


ಆದರೆ ಇಂದು ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನ ಬೆಳೆದು ನಿಂತಿದ್ದು, ಸಮೂಹ ಸಂವಹನದಲ್ಲಿ ಪ್ರಮುಖ ನಿರ್ಮಾಣಕತೃವಿನಂತೆ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಲಭ್ಯವಾಗುತ್ತಿರುವುದು ಮತ್ತು ಡಿಜಿಟಲ್ ಪೇಮೆಂಟ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಬಳಕೆ ಹೆಚ್ಚಾಗುತ್ತಿದೆ‌. ಈ ಮೂರು ಮಹತ್ತರ ಬದಲಾವಣೆಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಡಿಜಿಟಲ್ ಬದಲಾವಣೆಯನ್ನು ಅಥವಾ ಡಿಜಿಟಲ್ ಪಬ್ಲಿಷಿಂಗ್ ಸೈಟ್‌ನ್ನು ತರಬಹುದಾಗಿದೆ ಎಂದೆನ್ನುತ್ತಾರೆ ವಸಂತ್ ಶೆಟ್ಟಿಯವರು.


ಏನಿದು ಮೈ ಲ್ಯಾಂಗ್ ಬುಕ್ಸ್?

ಮೈ ಲ್ಯಾಂಗ್ ಬುಕ್ಸ್ ಎನ್ನುವಂತಹದ್ದು ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಮತ್ತು ಆಡಿಯೋ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಒಂದರ್ಥದಲ್ಲಿ ಡಿಜಿಟಲ್ ಪ್ರಕಾಶನ ಸಂಸ್ಥೆಯಾಗಿದ್ದು, ಕನ್ನಡದಲ್ಲಿ ಒಂದು ವಿನೂತನ ಪ್ರಯೋಗವಾಗಿದೆ.


ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಸಂಸ್ಥಾಪಕ ಪವಮಾನ್ ಪ್ರಸಾದ್

ಮೊಬೈಲ್ ಅಥವಾ ಟ್ಯಾಬ್ ಮೂಲಕವೇ ಪುಸ್ತಕಗಳನ್ನು ಕೊಂಡು ಅದರ ಮೂಲಕವೇ ಹೊಸ ಓದುಗರನ್ನು ತಂತ್ರಜ್ಞಾನದ ಮೂಲಕವೇ ತಲುಪುವಂತಹ ವಿನೂತನ ಪರಿಕಲ್ಪನೆಯಾಗಿದೆ.


"ಈ ರೀತಿಯಾಗಿ ಕನ್ನಡದಲ್ಲಿ ಇ-ಬುಕ್ ಮತ್ತು ಆಡಿಯೊ ಬುಕ್‌ನಂತಹ ಹೊಸ ವಿಚಾರಗಳನ್ನು ಬಳಸಿಕೊಂಡು ಬದಲಾವಣೆ ತರಬಹುದು. ಹಾಗೇ ಎಲ್ಲೆಡೆ ಪುಸ್ತಕ ಕೊಂಡೊಯ್ಯಲು ಸಾಧ್ಯವಿಲ್ಲ. ಆಗ ಥಟ್ಟನೆ ಓದಲು, ಕೇಳಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಆಧುನಿಕವಾದ ಹಾಗೂ ಸಮಕಾಲೀನವಾಗಿ ಆದ ರೀತಿಯ ವಿಷಯವನ್ನು ಕೊಡುವ ನಿಟ್ಟಿನಲ್ಲಿ ಡಿಜಿಟಲ್ ಪಬ್ಲಿಷಿಂಗ್ ಹೌಸ್‌ನ್ನು ಕಟ್ಟುತ್ತಿದ್ದೇವೆ," ಎನ್ನುವುದು ವಸಂತ್ ಶೆಟ್ಟಿಯವರ ಅಭಿಪ್ರಾಯ.


ಉದ್ದೇಶ

ಚಿತ್ರದುರ್ಗದ ಪವಾಮಾನ್ ಪ್ರಸಾದ್‌ರವರ ಕನಸು ಈ ಮೈ ಲ್ಯಾಂಗ್ ಬುಕ್ಸ್. ಅವರು ಮೂಲತಃ ಒಬ್ಬ ಟೆಕ್ಕಿಯಾಗಿದ್ದಾರೆ. ಚಿಕ್ಕಂದಿನಿಂದಲೂ ಸಾಹಿತ್ಯೆದೆಡೆಗೆ ಒಲವನ್ನು ಹೊಂದಿದವರಾಗಿದ್ದರು‌. ಕನ್ನಡದಲ್ಲಿ ಆಧುನಿಕ ರೀತಿಯಲ್ಲಿ ಡಿಜಿಟಲ್ ಆದಂತಹ ಪ್ರಕಾಶನ ಸಂಸ್ಥೆಯನ್ನು ಕಟ್ಟಿ, ಅದರ ಮೂಲಕ ಹೊಸ ಬರಹಗಾರರ ಬರಹಗಳು ಹಾಗೂ ಇ-ಬುಕ್ ಮತ್ತು ಆಡಿಯೋ ಬುಕ್‌ಗಳನ್ನು ತರಬೇಕು‌. ಅಲ್ಲದೇ ಈಗಾಗಲೇ ಬಂದಂತಹ ಒಳ್ಳೆಯ ಪುಸ್ತಕಗಳಿಗೆ ಹೊಸದಾದಂತಹ ಮಾರುಕಟ್ಟೆಯನ್ನು ಸೃಷ್ಟಿಸಬೇಕೆಂಬುದು ಅವರ ಉದ್ದೇಶ.


ಈಗಾಗಲೇ ಜೋಗಿ, ವಸುಧೇಂದ್ರ, ಕರಣಂ ಪವನ್ ಪ್ರಸಾದ್ ಮುಂತಾದವರು ಪುಸ್ತಕಗಳು ಮೈ ಲ್ಯಾಂಗ್ ಬುಕ್ಸ್ ಮೂಲಕ ಇ-ಬುಕ್ ಹಾಗೂ ಆಡಿಯೋ ಬುಕ್ ರೂಪದಲ್ಲಿ ಬರಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರಹಗಾರರನ್ನು ಇದು ಒಳಗೊಳ್ಳಲಿದೆ. ಈ ರೀತಿಯಾಗಿ ಹೊಸ ಬರಹಗಾರರಿಗೆ, ಓದುಗರಿಗೆ ಹಾಗೂ ಕೇಳುಗರಿಗೆ ತಲುಪುಬಹುದಾಗಿದೆ. ಸದ್ಯ ಇದು ಫೇಸ್‌ಬುಕ್‌ ಮೂಲಕ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದ್ದು ಫೆಬ್ರುವರಿ ತಿಂಗಳಿನಲ್ಲಿ ಮೊಬೈಲ್ ಆ್ಯಪ್ ಎಲ್ಲರಿಗೂ ಲಭ್ಯವಾಗುತ್ತದೆ. ಅದಕ್ಕಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳುವಲ್ಲಿ ಮೈ ಲ್ಯಾಂಗ್ ಬುಕ್ಸ್ ತೊಡಗಿಕೊಂಡಿದೆ.


ಕಾರ್ಯ ನಿರ್ವಹಿಸುವ ರೀತಿ

ಫೆಬ್ರವರಿ ತಿಂಗಳಲ್ಲಿ ಈ ಆ್ಯಪ್ ಬಿಡುಗಡೆ ಆಗಲಿದ್ದು, ನಿಮಗೆ ಇಷ್ಟವಾದ ಪುಸ್ತಕಗಳನ್ನು ಡಿಜಿಟಲ್ ಪೇಮೆಂಟ್ ಮೂಲಕ ಖರೀದಿ ಮಾಡಿ ಡೌನ್‌ಲೋಡ್ ಮಾಡಿದರೆ ಅದನ್ನು ಯಾವಾಗ ಬೇಕಾದರೂ ಓದಬಹುದು ಹಾಗೂ ಕೇಳಬಹುದು. ಇದರ ಜೊತೆಗೆ ಕೆಲವೊಂದು ಪುಟಗಳನ್ನು ಉಚಿತವಾಗಿ ಓದಲು ಅವಕಾಶವಿದೆ.