ತ್ರಿಪುರಾ ಬುಡಕಟ್ಟು ಜನರ ಆಯುರ್ವೇದ ಸಸ್ಯತೋಟ..!
ವಿಶ್ವಾಸ್ ಭಾರಾಧ್ವಾಜ್
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದಲ್ಲಿ ಆಯುರ್ವೇದ ಹಾಗೂ ನಿಸರ್ಗದತ್ತ ಗಿಡಮೂಲಿಕಾ ಉತ್ಪನ್ನಗಳಿಗೆ ರಾಜ ಗೌರವವಿದೆ. ಹೀಗಾಗಿ ಅರಣ್ಯ ಉತ್ಪನ್ನಗಳಿಂದ ಸ್ವದೇಶಿ ನಿರ್ಮಿತ ವಸ್ತುಗಳ ತಯಾರಿಕೆಗೆ ಜೀವ ಬಂದಿದೆ. ಅರಣ್ಯದಲ್ಲಿ ಸಹಜವಾಗಿ ಬೆಳೆಯುವ ಆಯುರ್ವೇದ ಹಾಗೂ ಗಿಡಮೂಲಿಕಾ ಸಸ್ಯಜನ್ಯಗಳ ಸಂರಕ್ಷಣೆಗೆ ತ್ರಿಪುರಾ ಮೂಲದ ಬುಡಕಟ್ಟು ಸಮೂಹವೊಂದು ವಿನೂತನ ಯೋಜನೆ ರೂಪಿಸಿದೆ. ಅಪರೂಪದ ಸಸ್ಯ ಪ್ರಭೇಧಗಳ ರಕ್ಷಣೆಗಾಗಿ ಗಿಡಮೂಲಿಕಾ ವನ್ಯವೃಕ್ಷಗಳ ಉದ್ಯಾನವನ ಅಥವಾ ಹರ್ಬಲ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಒಂದೆಡೆ ಅಪೂರ್ವ ಗಿಡಮೂಲಿಕಾ ಸಸ್ಯಗಳ ಸಂರಕ್ಷಣೆ ಹಾಗೂ ಆಯುರ್ವೇದಿಕ್ ಔಷಧ ಪದ್ಧತಿಯ ಅಭಿವೃದ್ಧಿ ಸಾಧಿಸುವತ್ತ ಈ ಸಮುದಾಯಗಳು ಶ್ರಮಿಸುತ್ತಿವೆ. ಈಗ ಸರ್ಕಾರಗಳೂ ಎಚ್ಚೆತ್ತುಕೊಂಡಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಸಾಂಸ್ಥಿಕ ರೂಪ ದೊರೆತಿದೆ.

ಕಾಂಚನಪುರ ಬುಡಕಟ್ಟು ಸಮುದಾಯದ ಹರ್ಬಲ್ ಗಾರ್ಡನ್
ತ್ರಿಪುರಾ ಉಪವಿಭಾಗೀಯ ಕೇಂದ್ರ ಕಾಂಚನಪುರದಲ್ಲಿರುವ ಬುಡಕಟ್ಟು ಜನಾಂಗದ ಆಯುರ್ವೇದಿಕ್ ವೈದ್ಯರ ತಂಡ ಇಂತದ್ದೊಂದು ಅಪೂರ್ವ ಕಾರ್ಯಕ್ಕೆ ಮುಂದಾಗಿದೆ. ತ್ರಿಪುರಾ ಸುತ್ತಮುತ್ತಲಿನ ಕಾಡಿನಲ್ಲಿ ವಿನಾಶದ ಅಂಚಿನಲ್ಲಿರುವ ಅಪರೂಪದ ಹಾಗೂ ವೈದ್ಯಕೀಯ ಗುಣವುಳ್ಳ ಸಸ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹರ್ಬಲ್ ಗಾರ್ಡನ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಕೃತಿದತ್ತವಾಗಿ ಲಭ್ಯವಾಗುವ ವಿವಿಧ ಆಯುರ್ವೇದಿಕ ಸಸ್ಯ ಸಂಪತ್ತು ಹಾಗೂ ಹರ್ಬಲ್ ಗುಣವಿರುವ ಗಿಡಗಳನ್ನು ಗುರುತಿಸಿ ಪಟ್ಟಿ ಮಾಡಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಸುವ ಮೂಲಕ ಆ ಜಾತಿಯ ಸಸ್ಯಗಳನ್ನು ಕಾಪಾಡಿ ಮುಂದಿನ ಪೀಳಿಗೆಗೂ ವರ್ಗಾಯಿಸುವ ಮಹೋನ್ನತ ಕೆಲಸಕ್ಕೆ ಇವರು ಮುಂದಾಗಿದ್ದಾರೆ.

ಜೊತೆಗೆ ಸಾಂಪ್ರದಾಯಿಕ ವೈದ್ಯಪದ್ದತಿ ಈಗೀಗ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಔಷಧೀಯ ಗುಣವುಳ್ಳ ಸಸ್ಯಗಳ ಬಗ್ಗೆ ಮಾಹಿತಿಯೂ ಲಭಿಸುತ್ತಿಲ್ಲ. ಹಿಂದಿನ ತಲೆಮಾರು ಅನುಸರಿಸುತ್ತಿದ್ದ ಆಯುರ್ವೇದ ಔಷಧ ಚಿಕಿತ್ಸೆಯ ಅಭ್ಯಾಸ ಈಗಿನ ತಲೆಮಾರಿನವರಿಗೆ ಅಪರಿಚಿತವಾಗಿದೆ. ಹೀಗಾಗಿ ಆಯುರ್ವೇದ ಗುಣ ಹೊಂದಿರುವ ಸಸ್ಯಗಳ ಪರಿಚಯವೂ ಈಗಿನ ತಲೆಮಾರಿಗೆ ಇಲ್ಲ. ಈ ಸ್ಥಿತಿ ಹೋಗಲಾಡಿಸಲು ಇರುವ ಏಕೈಕ ಮಾರ್ಗವೆಂದರೇ, ಉಳಿದಿರುವ ಆಯುರ್ವೇದ ಹಾಗೂ ಗಿಡಮೂಲಿಕೆಯ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸುವುದು ಹಾಗೂ ಅದಕ್ಕೆ ಅಗತ್ಯವಿರುವ ಔಷದೀಯ ಗುಣ ಹೊಂದಿರುವ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸುವುದು ಅಂದಿದ್ದಾರೆ ಕಾಂಚನಪುರದ ಸಾಂಪ್ರದಾಯಿಕ ಆಯುರ್ವೇದಿಕ್ ಚಿಕಿತ್ಸಕ ಸಖ್ಯ.
ಪ್ರಗತಿಯ ಕಾರಣ ಉಂಟಾಗುತ್ತಿರುವ ಅರಣ್ಯ ನಾಶದಿಂದ ಈಗಾಗಲೆ ಸಾಕಷ್ಟು ವೈವಿಧ್ಯಮಯ ಸಸ್ಯ ಸಂಪನ್ಮೂಲ ನಾಶವಾಗಿದೆ. ಇನ್ನೂ ಕೆಲವು ಅಪರೂಪದ ಗಿಡಮೂಲಿಕಾ ಸಸ್ಯಗಳು ವಿನಾಶದ ಅಂಚಿನಲ್ಲಿವೆ. ಈಗ ಕೇಂದ್ರ ಸರ್ಕಾರ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಂರಕ್ಷಣೆಯ ಬಗ್ಗೆ ಚಿಂತನೆ ನಡೆಸುತ್ತಿದೆ. ಹಾಗಾಗಿ ಉಳಿದ ಸಸ್ಯ ಪ್ರಭೇಧಗಳನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕಿದೆ ಅನ್ನುವುದು ಸಖ್ಯರವರ ಅಭಿಪ್ರಾಯ.

ವೈದ್ಯರಾಜ ಹರ್ಬಲ್ ಗ್ರೋವರ್ಸ್ ಸೊಸೈಟಿ
ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಯುರ್ವೇದ ಹಾಗೂ ಗಿಡಮೂಲಿಕ ಔಷಧಿಗಳಿಗೆ ಇನ್ನಿಲ್ಲದ ಬೇಡಿಕೆ ಒದಗಿದೆ. ತ್ರಿಪುರಾದ ಉತ್ತರ ಭಾಗದಲ್ಲಿರುವ ಕಾಂಚನಪುರ ಉಪವಿಭಾಗದಲ್ಲಿ ವೈದ್ಯರಾಜ ಹರ್ಬಲ್ ಗ್ರೋವರ್ಸ್ ಸೊಸೈಟಿ ಅನ್ನುವ ವಿಶಾಲ ಉದ್ಯಾನವನ ನಿರ್ಮಿಸಲಾಗಿದೆ. ಇಲ್ಲಿನ ಸಮಾನ ಕಾಳಜಿಯಿರುವ ಬುಡಕಟ್ಟು ಸಮುದಾಯದ ಯುವಕರು ತಮ್ಮ ಜನಾಂಗದ ಪಾರಂಪರಿಕ ಆಯುರ್ವೇದ ವೈದ್ಯರ ನೆರವಿನೊಂದಿಗೆ ಸುಮಾರು 55 ಬಗೆಯ ವಿಶೇಷ ಔಷದೀಯ ಗುಣವುಳ್ಳ ಸಸ್ಯಗಳನ್ನು ಗುರುತಿಸಿ ಬೆಳೆಸಿದ್ದಾರೆ. ಕಾಂಚನಪುರ ಬುಡಕಟ್ಟು ಸಮುದಾಯದ ಪಾರಂಪರಿಕ ವೈದ್ಯ ಹಾಗೂ ಗಿಡಮೂಲಿಕಾ ತೋಟವನ್ನು ನೋಡಿಕೊಳ್ಳುತ್ತಿರುವ ಅಮಿಯಾ ಚೌಧರಿ, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹರ್ಬಲ್ ಗಾರ್ಡನ್ನಲ್ಲಿ ಹಲವು ಬಗೆಯ ಸುಮಾರು 500ಕ್ಕೂ ಹೆಚ್ಚು ಆಯುರ್ವೇದಿಕ್ ಗಿಡಗಳನ್ನು ಬೆಳೆಸಲಾಗಿದೆ. ಇವುಗಳ ನೆರವಿನಿಂದ ಹೊಟ್ಟೆ ನೋವು, ತಲೆನೋವು, ವಿಷಮ ಶೀತ ಜ್ವರದಂತಹ ಸಾಮಾನ್ಯ ಖಾಯಿಲೆಗಳಿಂದ ಹಿಡಿದು ಹಾವು ಕಡಿತ, ಮೂಳೆ ಮುರಿತದಂತಹ ಅವಘಡಗಳಿಗೂ ಚಿಕಿತ್ಸೆ ನೀಡಬಹುದು. ಜೊತೆಗೆ ಲಿವರ್ ಕ್ಯಾನ್ಸರ್ನಂತಹ ಗಂಭೀರ ಆರೋಗ್ಯದ ಸಮಸ್ಯೆಗೂ ಆಯುರ್ವೇದ ಹಾಗೂ ಗಿಡಮೂಲಿಕೆಯ ಮನೆಮದ್ದಿನಲ್ಲಿ ಪರಿಹಾರವಿದೆ ಅಂತ ಅಮಿಯಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವೈದ್ಯಕೀಯ ಉತ್ಪನ್ನಗಳ ಸಂರಕ್ಷಣೆಗೆ ಸರ್ಕಾರದ ಉತ್ತೇಜನ
ತ್ರಿಪುರಾ ರಾಜಧಾನಿ ಅಗರ್ತಲಾ ಮೂಲದ ವೈದ್ಯಕೀಯ ಸಂಸ್ಥೆಯೂ ಸಹ ಈ ಹರ್ಬಲ್ ಗಾರ್ಡನ್ಗೆ ಸಾಕಷ್ಟು ಪ್ರೋತ್ಸಾಹ ಹಾಗೂ ಪ್ರಚಾರ ನೀಡುತ್ತಿದೆ. ತ್ರಿಪುರಾ ರಾಜ್ಯದ ಅರಣ್ಯ ಹಾಗೂ ಪರಿಸರ ಇಲಾಖೆ, ಹವಾಮಾನ ಇಲಾಖೆ ಹಾಗೂ ವೈದ್ಯಕೀಯ ವಿಭಾಗಗಳಿಂದ ಈ ಗಿಡಮೂಲಿಕಾ ತೋಟಗಳಿಗೆ ಸಾಕಷ್ಟು ನೆರವು ಲಭಿಸುತ್ತಿದೆ. ಜೊತೆಗೆ ಕೇಂದ್ರದ ಉತ್ತೇಜನವಿರುವ ಕಾರಣ ತ್ರಿಪುರಾ ಸರ್ಕಾರ ಸಾಕಷ್ಟು ತಾಂತ್ರಿಕ ನೆರವು ಹಾಗೂ ಹಣಕಾಸಿನ ಸಹಾಯಧನಗಳನ್ನೂ ನೀಡುತ್ತಿದೆ.
ತ್ರಿಪುರಾದಲ್ಲಿರುವ ಮುಖ್ಯ ಬುಡಕಟ್ಟು ಸಮೂಹಗಳಾದ ತ್ರಿಪುರೀ, ಚಕ್ಮಾ, ಮೋಗ್ ಹಾಗೂ ರಿಯಾಂಜ್ಗಳು ತಮ್ಮ ಪರಂಪರಾಗತ ಆಯುರ್ವೇದ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಮಂದುವರಿಯಲು ಉತ್ಸುಕರಾಗಿದ್ದಾರೆ. ಇದಕ್ಕೀಗ ಆರ್ಥಿಕ ಆಯಾಮವೂ ದೊರಕಿರುವುದರಿಂದ ಈ ಬಡಕಟ್ಟು ಸಮೂಹದ ಸಾಮಾಜಿಕ ಸ್ಥಿತಿಗತಿಗಳೂ ಉತ್ತಮವಾಗುತ್ತಿವೆ ಅಂತ ಚಕ್ಮಾ ಸಮುದಾಯದ ಸಾಂಪ್ರದಾಯಿಕ ಆಯುರ್ವೇದ ವೈದ್ಯ ವೈದ್ಯರಾಜ ಪುಣ್ಯಮಣಿ ಚಕ್ಮ ವಿಶ್ವಾಸದಿಂದ ಹೇಳುತ್ತಾರೆ.